ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುತ್ತಲಿನ ಹಳ್ಳಿಗಳಲ್ಲಿ ಎರಡು ಮನೆಗಳು ಕುಸಿದು ಬಿದ್ದಿದ್ದು, ಮರಗಳು ಧರೆಗುರುಳಿವೆ. ಮಳೆಯಿಂದಾಗಿ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಕಳೆದ 10-12 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಂಗ್ರಾಳಿ ಬಿ.ಕೆ. ಹಾಗೂ ಉಚಗಾಂವ ಗ್ರಾಮದಲ್ಲಿ ಎರಡು ಮನೆಗಳು ಕುಸಿದು, ಅಪಾರ ಹಾನಿ ಉಂಟಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕುಟುಂಬಗಳು ಬೀದಿ ಪಾಲಾಗಿ ಸಹಾಯಕ್ಕಾಗಿ ಮೊರೆ ಇಡುತ್ತಿವೆ.
ಕಂಗ್ರಾಳಿ ಬುದ್ರುಕ್ ಗ್ರಾಮದ ಸಂಗಮ ನಗರದ ಶಂಕರ ಯಶವಂತ ಭೋಪಳೆ ಅವರ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಕೆಲಸಕ್ಕಾಗಿ ಕುಟುಂಬಸ್ಥರು ಹೊರಗೆ ಹೋಗಿದ್ದರು. ಮಹಿಳೆ ಅಡುಗೆ ಮಾಡುತ್ತ ನೀರು ತರಲು ಹೊರಗಡೆ ಹೋದಾಗ ಗೋಡೆ ಬಿರುಕು ಬಿದ್ದು, ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಎಲ್ಲ ವಸ್ತುಗಳು ನಾಶಗೊಂಡಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷ ದತ್ತಾ ಪಾಟೀಲ, ಸದಸ್ಯರಾದ ಸುಜಾತಾ ಜಠಾರ, ದಾದಾಸಾಹೇಬ ಭದರಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧಾರಾಕಾರ ಮಳೆಯಿಂದ ತಾಲೂಕಿನ ಉಚಗಾಂವ ಗ್ರಾಮದ ಕಚೇರಿ ಗಲ್ಲಿಯಲ್ಲಿರುವ ಮನೆ ಕುಸಿದು ಬಿದ್ದಿದೆ. ಮನೆ ಬೀಳುವ ಲಕ್ಷಣ ಕಂಡು ಬಂದಿದ್ದರಿಂದ ಮನೆಯಲ್ಲಿದ್ದವರೆಲ್ಲ ಹೊರಗಡೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶರೀಫ ಜಮಾದಾರ ಎಂಬವರಿಗೆ ಸೇರಿದ ಈ ಮಣ್ಣಿನ ಮನೆ ನೆಲಕ್ಕುರುಳಿದೆ. ನಾಲ್ಕೈದು ದಿನಗಳಿಂದ ರಭಸದ ಮಳೆಯಿಂದಾಗಿ ಮನೆಯ ಗೋಡೆಗಳು ಕುಸಿದಿವೆ. ಬೆಳಗಾವಿ ಬಾಗಲಕೋಟೆ ರಸ್ತೆಯ ಗಾಂಧೀ ನಗರದಲ್ಲಿ ಬೃಹತ್ ಮಾವಿನ ಮರ ಧರೆಗುರುಳಿದೆ. ನಗರದಲ್ಲಿ ರಭಸದ ಮಳೆ ಸುರಿಯುತ್ತಿರುವುದಿಂದ ಮರ ನೆಲಕ್ಕುರುಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸುಮಾರು 50 ವರ್ಷದಷ್ಟು ಹಳೆಯದಾದ ಮಾವಿನ ಮರ ಇದಾಗಿದೆ.
ನಗರದಲ್ಲಿಯ ಅಪಾಯಕಾರಿ ಮರಗಳ ರೆಂಬೆಗಳನ್ನು ಹಾಗೂ ಶಿಥಿಲಾವಸ್ಥೆಯಲ್ಲಿರುವ ಮರಗಳನ್ನು ಕಡಿಯುವಂತೆ ಕಳೆದ ಏಪ್ರಿಲ್ ತಿಂಗಳಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳ ತುರ್ತು ಸಭೆ ನಡೆಸಿ ಅಪಾಯಕಾರಿ ಮರಗಳ ಬಗ್ಗೆ ಕ್ರಮಕ್ಕೆ ಸೂಚಿಸಿದ್ದರು. ಹೆಸ್ಕಾಂ ಅಧಿಕಾರಿಗಳು 520 ಅಪಾಯಕಾರಿ ಮರಗಳನ್ನು ಗುರುತಿಸಿ, ಅರಣ್ಯ ಇಲಾಖೆಗೆ ಪಟ್ಟಿ ಕೊಟ್ಟಿದ್ದರು. ಸದ್ಯ ಅಪಾಯಕಾರಿ ಮರಗಳ ರೆಂಬೆಗಳನ್ನು ಕಟಾವು ಮಾಡುವ ಕೆಲಸ ನಡೆದರೂ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಅಪಾಯಕಾರಿ ಮರಗಳ ಪಟ್ಟಿಯಲ್ಲಿರದ ಮರಗಳೂ ಬೀಳುತ್ತಿರುವುದರಿಂದ ಸಾರ್ವಜನಿಕರ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ನಾಲ್ಕೈದು ದಿನಗಳಿದ ಭಾರೀ ಮಳೆ ಆಗುತ್ತಿರುವುದರಿಂದ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಗಾಂಧಿ ನಗರ, ಮಾರುತಿ ನಗರ, ಶಾಸ್ತ್ರಿ ನಗರ, ಮಲಪ್ರಭಾ ನಗರ, ಜುನೆ ಬೆಳಗಾವಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಕೆಲವು ಮನೆಗಳ ಒಳಗೆ ನೀರು ನುಗ್ಗಿ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಗಾಂಧೀ ನಗರದಲ್ಲಿರುವ ಸಾಂಬ್ರಾಕ್ಕೆ ಹೋಗುವ ಮಾರ್ಗ ಮಧ್ಯದ ಸೇತುವೆ ಬಳಿ ನೀರು ವಾಹನ ಸವಾರರು ಪರದಾಡುವಂತಾಗಿದೆ.