ನವದೆಹಲಿ:ಕೋವಿಡ್ 19 ವೈರಸ್ ಪೀಡಿತ ರೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ನವಜಾತ ಶಿಶುವಿಗೆ ಜನ್ಮ ನೀಡಿದ್ದ 20 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸ್ವಚ್ಛತಾ ಸಿಬ್ಬಂದಿ ಹಾಗೂ ಸ್ಟೋರ್ ವರ್ಕರ್ ಕೋವಿಡ್ ಸಂತ್ರಸ್ತೆ ಜತೆ ಅಸಭ್ಯವಾಗಿ ವರ್ತಿಸಿರುವುದಾಗಿ ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದ್ದು, ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಲವ್ ಕುಶ್ ಮತ್ತು ಪ್ರವೀಣ್ ವಿರುದ್ಧ ಐಪಿಸಿ ಸೆಕ್ಷನ್ 354ರ ಅನ್ವಯ ದೂರು ದಾಖಲಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರು ಕೆಲಸಗಾರರನ್ನು ಕೆಲದಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಜೆನ್ಸಿಯೊಂದರ ಮೂಲಕ ಇಬ್ಬರನ್ನು ಆಸ್ಪತ್ರೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ನಾವು ಇಬ್ಬರನ್ನೂ ಕೆಲಸದಿಂದ ತೆಗೆದುಹಾಕಿದ್ದೇವೆ. ಅವರು ಕ್ಷಮೆ ಕೇಳಿದ್ದು, ನಾವು ಇಬ್ಬರ ವಿರುದ್ ದೂರು ನೀಡಿರುವುದಾಗಿ ಆಸ್ಪತ್ರೆಯ ವಕ್ತಾರ ಪಿಟಿಐಗೆ ತಿಳಿಸಿದ್ದಾರೆ.