ಮಂಗಳೂರು/ಪಣಂಬೂರು: “ಒಖೀ’ ಚಂಡಮಾರುತ ಪ್ರಭಾವದಿಂದ ಮಂಗಳೂರು -ಲಕ್ಷದ್ವೀಪ ಮಧ್ಯೆ ಸರಕು ಸಾಗಾಟ ನಡೆಸುತ್ತಿದ್ದ ಮೂರು ಮಂಜಿ (ಮಿನಿ ಬೋಟ್)ಗಳು ಶುಕ್ರವಾರ ಲಕ್ಷದ್ವೀಪದ ಕವರತ್ತಿ ದ್ವೀಪದಲ್ಲಿ ಅಪಾಯಕ್ಕೆ ಸಿಲುಕಿದ್ದು, ಅಲ್ಲೋರ್ ಹೆಸರಿನ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಯಹವಾ ಹೆಸರಿನ ಇನ್ನೊಂದು ಬೋಟ್ ಮುಳುಗಡೆಯ ಹಂತದಲ್ಲಿದೆ. ಇನ್ನೂ ಒಂದು ಬೋಟ್‌ಗೆ ಹಾನಿಯಾಗಿದೆ. ಮೂರೂ ಬೋಟ್‌ಗಳಲ್ಲಿ ಒಟ್ಟು 14 ಮಂದಿ ಇದ್ದು, ಅವರನ್ನು ರಕ್ಷಿಸಲಾಗಿದೆ.
ಈ ಬೋಟ್‌ಗಳು ಮಂಗಳೂರಿನಿಂದ ಕಬ್ಬಿಣ, ಜಲ್ಲಿ ಮತ್ತಿತರ ಕಟ್ಟಡ ನಿರ್ಮಾಣ ಸರಕು ಹೊತ್ತು ಗುರುವಾರ ಲಕ್ಷದ್ವೀಪಕ್ಕೆ ತೆರಳಿ ದ್ದವು. ಕವರತ್ತಿ ದ್ವೀಪದಲ್ಲಿ ಲಂಗರು ಹಾಕಿದ್ದು, ಎರಡು ಬೋಟ್‌ಗಳಲ್ಲಿನ
ಸರಕನ್ನು ಖಾಲಿ ಮಾಡಲಾಗಿತ್ತು. ಒಂದು ಬೋಟ್‌ನಲ್ಲಿ ಮಾತ್ರ ಸರಕು ಇದ್ದು, ಅದು ಮುಳುಗಿದೆ ಎಂದು ಮೂಲಗಳು ಹೇಳಿವೆ. ಕೊಚ್ಚಿಯ ಕೋಸ್ಟ್‌ಗಾರ್ಡ್ ಹಾಗೂ ನೌಕಾ ಪಡೆ ಸಿಬಂದಿ ಕಾರ್ಯಾಚರಣೆ ನಡೆಸಿ ಎರಡು ಬೋಟ್‌ಗಳಲ್ಲಿದ್ದವರನ್ನು ರಕ್ಷಿಸಿದ್ದಾರೆ.
3 ಮೀನುಗಾರಿಕಾ ದೋಣಿ ಅಪಾಯದಲ್ಲಿ : ಏತನ್ಮಧ್ಯೆ ಮಂಗಳೂರು ಹಳೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೂರು ಮೀನುಗಾರಿಕಾ ದೋಣಿಗಳು ಅಳಿವೆ ಬಾಗಿಲಿಗೆ ಬರಲಾಗದೆ ಅಪಾಯದಲ್ಲಿವೆ. ಅವುಗಳಲ್ಲಿ ಸುಮಾರು 20 ಮೀನುಗಾರರು ಇದ್ದಾರೆ ಎಂದು ತಿಳಿದುಬಂದಿದೆ. ಸಫಾ ಫಿಶರೀಸ್, ಎನ್‌ಎಂಪಿಟಿ ಫಿಶರೀಸ್ ಮತ್ತು ಸಫಾ ಟೂ ಫಿಶರೀಸ್ ಅಪಾಯಕ್ಕೆ ಸಿಲುಕಿದ ದೋಣಿಗಳಾಗಿವೆ.
ಮೂರೂ ಬೋಟ್‌ಗಳವರು ಲಂಗರು ಹಾಕಿ ನಿಂತಿದ್ದೇವೆ. ರಾತ್ರಿ ವೇಳೆಗೆ ಗಾಳಿಯ ರಭಸ ಸ್ವಲ್ಪ ಕಡಿಮೆಯಾಗಿದೆ. ಎಲ್ಲರೂ ಬೋಟ್‌ನಲ್ಲಿಯೇ ಇದ್ದೇವೆ. ಸಮುದ್ರ ಇನ್ನಷ್ಟು ಶಾಂತವಾದರಷ್ಟೇ ಇಲ್ಲಿಂದ ಹೊರಡಲು ಸಾಧ್ಯ ಎಂದು ಬೋಟ್‌ನಲ್ಲಿರುವ ಅಲೆಕ್ಸ್ ಅವರು ಸಂಬಂಧಿಕರಿಗೆ ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಎನ್‌ಎಂಪಿಟಿ ಅಥವಾ ಮೀನುಗಾರಿಕಾ ದಕ್ಕೆಗೆ ಬರುವುದಾಗಿ ಮೀನುಗಾರರು ತಿಳಿಸಿದ್ದಾರೆ.
ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಬಂದರಿನ ಆಡಳಿತ ಮಂಡಳಿ ದೋಣಿಯು ಎನ್‌ಎಂಪಿಟಿ ಪ್ರವೇಶಿಸಲು ಒಪ್ಪಿದೆ ಎಂದು ಬಂದರಿನ ಅಧಿಕಾರಿಗಳು ತಿಳಿಸಿದ್ದಾರೆ.