Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ 2 ಜಿಂಕೆ ದುರ್ಮರಣ

07:16 AM Mar 08, 2019 | |

ರಾಮನಗರ: ಅಪರಿಚಿತ ವಾಹನಕ್ಕೆ ಸಿಲುಕಿ ಎರಡು ಚಿಂಕೆಗಳು ಸಾವನ್ನಪ್ಪಿರುವ ಘಟಕೆ ತಾಲೂಕಿನ ಮಾಯಗಾನಹಳ್ಳಿ ಬಳಿ ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಹುಲ್ತಾರ್‌ ಅರಣ್ಯ ಪ್ರದೇಶ ಮತ್ತು ಹಂದಿಗೊಂಡಿ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜಿಂಕೆಗಳು ಸೇರಿದಂತೆ ಕಾಡು ಪ್ರಾಣಿಗಳು ಆಗಾಗ್ಗೆ ಓಡಾಟ ನಡೆಸುತ್ತವೆ. ನಡುವೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಹೋಗಿದೆ. ರಾತ್ರಿ ವೇಳೆ ಜಿಂಕೆಗಳು ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಯಾವುದೋ ವಾಹನ ಜಿಂಕೆಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡರಿಂದ ಮೂರು ವರ್ಷ ವಯಸ್ಸಿನ ಎರಡು ಗಂಡು ಜಿಂಕೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ: ಹೆದ್ದಾರಿ ರಸ್ತೆಯಲ್ಲಿ ಸಾಗುತ್ತಿದ್ದ ಕೆಲವು ಪ್ರಯಾಣಿಕರು ತಡರಾತ್ರಿ ಜಿಂಕೆಗಳ ಸಾವನ್ನು ಗಮನಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಿಂಕೆಗಳ ಕಳೇಬರವನ್ನು ರಾಮನಗರ ಅರಣ್ಯ ವಲಯ ಪ್ರದೇಶದ ಯಂಗಯ್ಯನಕೆರೆ ಸಸ್ಯ ಕ್ಷೇತ್ರದಲ್ಲಿ ಪಶು ವೈದ್ಯ ಡಾ.ನಜೀರ್‌ ಅಹಮದ್‌ ಶವಪರೀಕ್ಷೆ ನಡೆಸಿ ಅಗ್ನಿಸ್ಪರ್ಶ ಮಾಡಲಾಗಿದೆ. 

ಅಂಡರ್‌ ಪಾಸ್‌ ನಿರ್ಮಾಣಕ್ಕೆ ಸಲಹೆ: ಸುದ್ದಿಗಾರರೊಂದಿಗೆ ವಲಯ ಅರಣ್ಯಾಧಿಕಾರಿ ಎ.ಎಲ್‌.ದಾಳೇಶ್‌ ಮಾತನಾಡಿ, ಹುಲ್ತಾರ್‌ ಅರಣ್ಯ ಮತ್ತು ಹಂದಿಗೊಂದಿ ಅರಣ್ಯದಲ್ಲಿ ಅನೇಕ ವನ್ಯ ಜೀವಿಗಳಿವೆ. ಎರಡೂ ಅರಣ್ಯ ಪ್ರದೇಶಗಳು ಬಹಳ ಹತ್ತಿರದಲ್ಲೇ ಇರುವುದರಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವನ್ಯಜೀವಿಗಳು ಸಂಚರಿಸುವಾಗ ಇಂತಹ ಅನಾಹುತಗಳು ಸಂಭವಿಸುತ್ತವೆ.

ಕಾಡು ಪ್ರಾಣಿಗಳು ನಡೆದಾಡುವ ಸ್ಥಳಗಳ ಬಗ್ಗೆ ಇಲಾಖೆ ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಗಮನ ಸೆಳೆದಿದ್ದು, ಅಂಡರ್‌ ಪಾಸ್‌ಗಳ ನಿರ್ಮಾಣಕ್ಕೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌.ಇ. ಕ್ರಾಂತಿ, ಎಸಿಎಫ್‌ ಎಂ.ರಾಮಕೃಷ್ಣಪ್ಪ, ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್‌, ಅರಣ್ಯ ರಕ್ಷಕರಾದ ನಾರಾಯಣ್‌, ಶ್ರೀನಿವಾಸ್‌, ರವಿ ಹಾಜರಿದ್ದರು.
 
ವಾಹನಗಳ ವೇಗಕ್ಕೆ ಕಡಿವಾಣ ಹಾಕಿ: ರಾಮನಗರ ತಾಲೂಕಿನ ಸಂಗನಬಸವನದೊಡ್ಡಿ, ಮಾಯಗಾನಹಳ್ಳಿ, ಕೆಂಪನಹಳ್ಳಿ, ಕಲ್ಲುಗೋಪಹಳ್ಳಿ ವರೆಗೆ ಎರಡೂ ಕಡೆಗಳಿಂದಲೂ ವನ್ಯ ಜೀವಿಗಳು ರಾತ್ರಿ ವೇಳೆ ರಸ್ತೆ ದಾಟುತ್ತಿರುತ್ತವೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮಿತಿಮೀರಿದ ವೇಗದಿಂದ ಪ್ರಾಣಿಗಳು ಅಪಾಯ ಎದುರಿಸುತ್ತಿವೆ. ಈ ಕೂಡಲೇ ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಲ್ಲಲ್ಲಿ ಎಚ್ಚರಿಕೆಯ ನಾಮ ಫಲಕಗಳನ್ನು ಹಾಕಿ ವಾಹನಗಳ ವೇಗಕ್ಕೆ ಕೊಂಚ ಕಡಿವಾಣ ಹಾಕಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next