ಲಕ್ನೋ: ಉತ್ತರಪ್ರದೇಶದ ಉನ್ನಾವ್ ದಲ್ಲಿ ಮತ್ತೊಂದು ದುರಂತ ಪ್ರಕರಣ ವರದಿಯಾಗಿದ್ದು, ಹುಲ್ಲು ಕತ್ತರಿಸಲು ತೆರಳಿದ್ದ ಮೂವರು ಅಪ್ರಾಪ್ತ ದಲಿತ ಬಾಲಕಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬುಧವಾರ(ಫೆ.17) ರಾತ್ರಿ ಪತ್ತೆಯಾಗಿದ್ದು, ಇವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪದಿಂದ ಗೊಗೊಯ್ ದೋಷಮುಕ್ತ : ಸುಪ್ರೀಂ
ಮೂವರಿಗೂ ವಿಷಪ್ರಾಶನ ಮಾಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರು ಬಾಲಕಿಯರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬಳು ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಉನ್ನಾವ್ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಲಕರ್ಣಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಬಾಲಕಿಯರು ಹುಲ್ಲು ಕತ್ತರಿಸಲು ತೆರಳಿದ್ದರು. ವೈದ್ಯರ ಹೇಳಿಕೆ ಪ್ರಕಾರ ಮೂವರು ವಿಷ ಸೇವಿಸಿರುವ ಅಂಶ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕುಲಕರ್ಣಿ ತಿಳಿಸಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಲು ಆರು ಮಂದಿ ಪೊಲೀಸರ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಕುಲಕರ್ಣಿ ವಿವರಿಸಿದ್ದಾರೆ. ಯಾವ ಕಾರಣದಿಂದ ಸಾವು ಸಂಭವಿಸಿದೆ ಎಂಬ ಬಗ್ಗೆ ಕಾರಣ ತಿಳಿಯಲು ಪೋಸ್ಟ್ ಮಾರ್ಟ್ಂ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.