ಬೆಳಗಾವಿ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲೂಕು ಪಂಚಾಯತ್ ಆಗಿರುವ ಬೆಳಗಾವಿಗೆ ಕೇವಲ 2 ಕೋಟಿ ರೂ. ಅನುದಾನ ಸಾಲುತ್ತಿಲ್ಲ. ಹೀಗಾಗಿ 10 ಕೋಟಿ ರೂ. ಮಂಜೂರು ಮಾಡಬೇಕು ಎಂದು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಸ್ವೀಕರಿಸಲಾಯಿತು.
ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇನ್ನೂವರೆಗೆ ಅನುದಾನ ಹೆಚ್ಚಿಸುವಲ್ಲಿ ಸರ್ಕಾರ ಕ್ರಮ ಕೈಗೊಂಡಿಲ್ಲ. ಮುಂದೆ ನಿಧಿ ಮಂಜೂರು ಮಾಡಿ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು ಎಂದರು.
ಮರಾಠಿ ಮಾಧ್ಯಮ ಮೂರನೇ ತರಗತಿ ಪಠ್ಯ ಪುಸ್ತಕದಲ್ಲಿ ಅನೇಕ ಲೋಪದೋಷಗಳಿರುವ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲೂ ದನಿಯೆತ್ತಿದ ಸದಸ್ಯರು, ಕಾಗುಣಿತ ತಪ್ಪಿರುವ ಪುಸ್ತಕಗಳನ್ನು ಹಿಂಪಡೆದು ಹೊಸ ಪುಸ್ತಕಗಳನ್ನು ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ಬಿಇಒ ಲೀಲಾವತಿ ಹಿರೇಮಠ ಮಾತನಾಡಿ, ಪಠ್ಯಪುಸ್ತಕದಲ್ಲಿ ತಪ್ಪುಗಳು ಆಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಿ ಸರಬರಾಜು ಮಾಡುವಂತೆ ಸೂಚಿಸಲಾಗಿದೆ ಎಂದರು.
Advertisement
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ ಈ ಬಗ್ಗೆ ಎಲ್ಲ ಸದಸ್ಯರು ದನಿಗೂಡಿಸಿ ನಿರ್ಣಯ ತೆಗೆದುಕೊಂಡರು. ರಾಜ್ಯ ಸರ್ಕಾರ ಈಗ ನೀಡುತ್ತಿರುವ 2 ಕೋಟಿ ರೂ. ಯಾವುದಕ್ಕೂ ಸಾಲುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಇರುವುದರಿಂದ ಅನುದಾನ ಸಾಲುತ್ತಿಲ್ಲ. ಹೀಗಾಗಿ ಅನುದಾನವನ್ನು 10 ಕೋಟಿ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದರು.
Related Articles
Advertisement
ಕಾಕತಿ ತಾಪಂ ಸದಸ್ಯ ಯಲ್ಲಪ್ಪ ಕೋಳೆಕರ ಮಾತನಾಡಿ, ಎಪಿಎಂಸಿ ಪ್ರಾಂಗಣದಲ್ಲಿ ಆರಂಭಗೊಂಡಿರುವ ಸಗಟು ತರಕಾರಿ ಮಾರುಕಟ್ಟೆಯ ಮಳಿಗೆಗಳನ್ನು ಎಸ್‌ಸಿ-ಎಸ್‌ಟಿ ಸಮುದಾಯಕ್ಕೂ ಮೀಸಲಿಡಬೇಕು. ನಂತರ ಇವುಗಳನ್ನು ಹರಾಜು ಮಾಡಬೇಕು ಎಂಬ ನಿಯಮವಿದೆ. ಆದರೆ ನಿಯಮ ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಏಜೆಂಟರು, ವ್ಯಾಪಾರಿಗಳು ಹಾಗೂ ದಲ್ಲಾಳಿಗಳ ಹಾವಳಿಯಿಂದ ಈ ಮಳಿಗೆಗಳು ಕೈತಪ್ಪಿ ಹೋಗುತ್ತಿವೆ. ಹೀಗಾಗಿ ಈ ಸಮುದಾಯದ ಜನರಿಗೂ ಸಿಗುವಂತಾಗಬೇಕು ಎಂದು ಮನವಿ ಮಾಡಿದರು.
ತಾಪಂ ಇಒ ಪದ್ಮಜಾ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಮಳೆಗಾಲ ಆರಂಭ ಆಗುವುದರೊಳಗೆ ದುರಸ್ತಿ ಕಾರ್ಯ ಕೈಗೊಂಡರೆ ಮಕ್ಕಳಿಗೆ ಅನುಕೂಲವಾಗುತ್ತದೆ. ಇನ್ನುಳಿದ ಕೆಲಸಗಳನ್ನು ಕೈಗೊಳ್ಳುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.
ತಹಶೀಲ್ದಾರ್ ಮಂಜುಳಾ ನಾಯಕ ಮಾತನಾಡಿ, ಯಾವ ಕ್ಷೇತ್ರಗಳಲ್ಲಿ ಕಾಮಗಾರಿಗಳು ನಡೆಯಬೇಕು ಎಂಬ ಬಗ್ಗೆ ಸದಸ್ಯರು ಮಾಹಿತಿ ನೀಡಬೇಕು. ಗ್ರಾಪಂ, ತಾಪಂ ಹಾಗೂ ಜಿಪಂ ವ್ಯಾಪ್ತಿಯಡಿ ಬರುವ ಅನುದಾನ ಬಳಸಿಕೊಂಡು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸುತ್ತಿರುವುದರಿಂದ ಅಂಗನವಾಡಿಗಳಿಗೆ ಹಿನ್ನಡೆ ಆಗುತ್ತಿರುವ ಬಗ್ಗೆ ಸದಸ್ಯರು ಪ್ರಶ್ನೆ ಎತ್ತಿದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇವತಿ ಹೊಸಮಠ ಮಾತನಾಡಿ, ಇದರಿಂದ ಅಂಗನವಾಡಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಉಪಾಧ್ಯಕ್ಷ ಮಾರುತಿ ಸನದಿ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಬಿತ್ತನೆ ಬೀಜ ಕೊರತೆಯಾಗದಿರಲಿ: ಶಂಕರಗೌಡ
ಬಿತ್ತನೆ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೃಷಿ ಚಟುವಟಿಕೆಗಳ ಕುರಿತು ರೈತರಿಗೆ ಅಗತ್ಯ ಸಲಹೆ ನೀಡಬೇಕು. ಮಳೆ ಕೊರತೆ ಹಿನ್ನೆಲೆಯಲ್ಲಿ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಿ.ಬಿ. ಕಲ್ಯಾಣಿ ಮಾತನಾಡಿ, ತಾಲೂಕಿನಲ್ಲಿ 51,680 ಹೆಕ್ಟೇರ್ ಕೃಷಿ ಭೂಮಿಯಿದ್ದು, 9,130 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಜೂ.20ರ ನಂತರ ಮಳೆಯಾಗುವ ಸಾಧ್ಯತೆ ಇದೆ. 13 ಕೇಂದ್ರಗಳನ್ನು ತೆರೆದು ಬೀಜ ವಿತರಣೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಬೀಜಗಳ ಕೊರತೆ ಇಲ್ಲ ಎಂದು ತಿಳಿಸಿದರು.
ಸದಸ್ಯೆಯಿಂದ ತಾಪಂ ಸಿಬ್ಬಂದಿ ತರಾಟೆಗೆ:
ವೈಯಕ್ತಿಕ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲು ಹಿಂದೇಟು ಹಾಕಿದ ತಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸದಸ್ಯೆ ಶಮೀನಾ ನದಾಫ್ ಅವರು, ಸಭೆಗೆ ಸಿಬ್ಬಂದಿಯನ್ನು ಕರೆಯಿಸಿ ಅಪಮಾನ ಮಾಡಿರುವ ಪ್ರಸಂಗ ನಡೆಯಿತು. ತಾಪಂನ ಟಪಾಲು ವಿಭಾಗದಲ್ಲಿರುವ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಆಗ ಸಿಬ್ಬಂದಿಯನ್ನು ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಕರೆಯಿಸಿ ಬುದ್ಧಿ ಮಾತು ಹೇಳಿದರು. ಸರಿಯಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಬೇರೆ ಕಡೆಗೆ ವರ್ಗ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆ ಬಳಿಕ ಕಚೇರಿಯಲ್ಲಿ ವಿಚಾರಿಸಿದಾಗ, ತಾಪಂ ಸದಸ್ಯೆ ಶಮೀನಾ ನದಾಫ ಅವರು ತಮ್ಮ ವೈಯಕ್ತಿಕ ಆಮಂತ್ರಣ ಪತ್ರಿಕೆಗಳನ್ನು ಹಂಚುವಂತೆ ಆ ಸಿಬ್ಬಂದಿಗೆ ನೀಡಿದ್ದರು. ಪತ್ರಿಕೆಗಳು ಸರಿಯಾಗಿ ಹಂಚಿಕೆ ಮಾಡಿಲ್ಲ ಎಂಬ ಕೋಪದಿಂದ ಸಿಬ್ಬಂದಿ ವಿರುದ್ಧ ಸಭೆಯಲ್ಲಿ ರೇಗಿದ್ದಾರೆ ಎಂದು ಹೆರಸು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಉದಯವಾಣಿಗೆ ತಿಳಿಸಿದರು.