ತುಮಕೂರು: ಮುಂದಿನ ಬಜೆಟ್‌ನಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ 2 ಕೋಟಿ ರೂ. ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ತಿಳಿಸಿದರು.
ಡಾ| ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ವತಿಯಿಂದ ಸೋಮವಾರ ನಡೆದ ರಾಜ್ಯಮಟ್ಟದ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಎಂ ಅವರು ಈ ಹಿಂದೆ ಪತ್ರಿಕಾ ವಿತರಕರಿಗೆ ನೀಡಿದ್ದ ಭರವಸೆಯಂತೆ 2 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಡಲು ಬದ್ಧರಾಗಿದ್ದಾರೆ. ವಿತರಕರ ದಿನಾಚರಣೆ ಸಂಬಂಧ ಅವರೊಡನೆ ಚರ್ಚಿಸುವಾಗ ಖುದ್ದು ಮುಖ್ಯಮಂತ್ರಿಗಳೇ ಈ ಕುರಿತು ಖಾತರಿಪಡಿಸಿದ್ದು, ಗ್ಯಾರಂಟಿಗಳ ಅನುಷ್ಠಾನ ಕಾರಣಕ್ಕೆ ಈ ಬಾರಿ ಕೊಡಲು ಸಾಧ್ಯವಾಗಿಲ್ಲ. ಮುಂದಿನ ಬಜೆಟ್‌ನಲ್ಲಿ ವಿತರಕರ ಬೇಡಿಕೆ ಈಡೇರಲಿದೆ ಎಂದು ಸಿಎಂ ಖಚಿತವಾಗಿ ನುಡಿದಿದ್ದಾರೆ ಎಂದು ವಿತರಕರ ಗಮನಕ್ಕೆ ತಂದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್ ಮತ್ತು ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನಿಡಿದರು.
ಸ್ವಾಮಿ ಜಪಾನಂದಜೀ ಮಾತನಾಡಿ, ಮಳೆ, ಚಳಿ, ಬಿಸಿಲೆನ್ನದೆ ನಿತ್ಯ ಮನೆ, ಕಚೇರಿಗೆ ಮುಂಜಾನೆಯೇ ಪತ್ರಿಕೆ ಹಾಕುವ ವಿತರಕರ ನೆರವಿಗೆ ಸರಕಾರ, ಪತ್ರಿಕಾ ಮಾಲಕರು ಧಾವಿಸಬೇಕು. ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತೆ, ಮಕ್ಕಳ, ಶಿಕ್ಷಣ, ಆರೋಗ್ಯಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.
ಅನ್ಯೋನ್ಯ ಸಂಬಂಧ
ಸಿದ್ಧರಬೆಟ್ಟ ರಂಭಾಪುರಿ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪತ್ರಿಕೆ ಒಂದು ಕೈಯಾದರೆ, ವಿತರಕರು ಮತ್ತೂಂದು ಕೈ. ಎರಡೂ ಸಂಬಂಧಗಳು ಅನ್ಯೋನ್ಯ ವಾಗಿರಬೇಕು ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ, ಚಿ.ನಿ. ಪುರುಷೋತ್ತಮ್, ಸಂಘದ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿದರು.
ಐಎಫ್ಡಬ್ಲೂಜೆ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಪತ್ರಕರ್ತ ಟಿ.ಎನ್.ಮಧುಕರ್, ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಮತ್ತಿತರರಿದ್ದರು.