ಶಿರಸಿ: ಜಿಲ್ಲಾ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿರುವ ಶಿರಸಿಯಲ್ಲೂ ನಗರಸಭೆ ಮೂಲಕ ನಗರದ ಅಭಿವೃದ್ಧಿ, ಮೂಲ ಸೌಲಭ್ಯ ಹೆಚ್ಚಳ ಕಾಮಗಾರಿಗೆ ಹಣ ಬಂದರೂ ಪೂರ್ಣ ಅನುಷ್ಠಾನಕ್ಕೆ ತೊಡಕಾದ ಪ್ರಸಂಗ ಬೆಳಕಿಗೆ ಬಂದಿದೆ.
ನಗರಸಭೆಗೆ ಕಳೆದ 2019-20ನೇ ಸಾಲಿನಲ್ಲಿ ನಗರೋತ್ಥಾನದಲ್ಲಿ ವಿವಿಧ ಕಾಮಗಾರಿ ನಡೆಸಲು 18 ಕೋ.ರೂ. ಅನುದಾನ ಬಂದಿತ್ತು. ಶಿರಸಿ ನಗರಸಭೆ ಪಾಲಿಗೆ ಇದೊಂದು ದೊಡ್ಡ ಮೊತ್ತದ ಅನುದಾನವೇ ಹೌದು. ಹಾಳಾದ ನಗರದ ರಸ್ತೆ ದುರಸ್ತಿಗಳು, ಚರಂಡಿಗಳು ಹಾಳಾಗಿದ್ದರೆ ಅವುಗಳ ಪುನರ್ ನಿರ್ಮಾಣ, ಫೂಟ್‌ಪಾತ್ ಕಾಮಗಾರಿ, ರಾಜ ಕಾಲುವೆ, ಒಳ ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳು ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿತ್ತು. ಯಾವ ಭಾಗಕ್ಕೆ ಎಷ್ಟು, ಯಾವ ವಾರ್ಡ್‌ಗೆ ಎಷ್ಟು ಎಂಬುದು ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನ್ಯಾಯಾಲಯದ ಮೊರೆಯ ಪ್ರಕರಣ ಇರುವುದರಿಂದ ಅಧಿಕಾರ ಸಿಕ್ಕಿರಲಿಲ್ಲ. ಇದರಿಂದ ಅಧಿಕಾರಿಗಳು ತಮಗೆ ಗೊತ್ತಿದ್ದ ಕಾಮಗಾರಿಗಳ ಪಟ್ಟಿಯನ್ನು ಇಟ್ಟು ನಗರೋತ್ಥಾನ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದರು.
ಕಳೆದ ಮಾ.3 ರಿಂದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಹಿನ್ನೆಲೆಯಲ್ಲೂ ಕೆಲವು ರಸ್ತೆ ಅಭಿವೃದ್ಧಿ, ಫೂಟ್‌ಪಾತ್ ನಿರ್ಮಾಣದಂತಹ ಕಾಮಗಾರಿಗಳು ವೇಗವಾಗಿ ನಡೆದವು. ಕೆಲವು ಕಾಮಗಾರಿಗಳು ಇನ್ನೂ ಗುಣಮಟ್ಟದಲ್ಲಿ ಆಗಬೇಕು ಎನ್ನುವ ಒತ್ತಾಯದ ಮಧ್ಯೆಯೇ ಪೂರ್ಣಗೊಂಡಿದ್ದವು. ನಗರಸಭೆ ಕಾಮಗಾರಿಗಳಲ್ಲಿ ಕೆಲವು ಗಟಾರ ಕಾಮಗಾರಿಗಳೂ ಆಮೆ ಗತಿಯಲ್ಲಿ ನಡೆದವು. ಟಿಎಸ್‌ಎಸ್ ಒಳ ರಸ್ತೆ ಗಟಾರ ಕಾಮಗಾರಿಗೂ ಕೆಲ ದಿನಗಳು ಗ್ರಹಣ ಹಿಡಿದಿದ್ದವು. ಈ ಮಧ್ಯೆ ಅನುದಾನ ಬಂದ ಬಳಿಕ 14 ಕೋಟಿ ರೂ.ಗಳಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಮಾ.31 ಬಂದರೂ ಇನ್ನೂ 4 ಕೋಟಿ ರೂ.ಗಳ ಕಾಮಗಾರಿ ಆಗಬೇಕು. ಆ ಪೈಕಿ ಕೆಲವು ಕಾಮಗಾರಿಗಳು ಆಗುತ್ತಿವೆ. ಮಾ.31ಕ್ಕೆ ಪೂರ್ಣಗೊಳಿಸಲು ಕೆಲವು ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಕೂಡ ಕಾಡತೊಡಗಿವೆ. ಈಗಾಗಲೇ 2 ಕೋಟಿ ರೂ. ಗಳಷ್ಟು ಕಾಮಗಾರಿ ಆರಂಭ ಆಗಿದ್ದರಿಂದ ಮಾರ್ಚ್ ನಂತರ ಕೂಡ ಮುಂದುವರಿಕೆ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಶಿರಸಿಗೆ ಬಂದ 18 ಕೋಟಿಯಲ್ಲಿ ಕೊನೆಗೂ 2 ಕೋಟಿ ರೂ. ಹಣ ವಾಪಸ್ ಹೋಗುವುದು ಪಕ್ಕಾ ಆದಂತೆ ಕಾಣಲಿದೆ ಎನ್ನಲಾಗಿದೆ.
ನಗರೋತ್ಥಾನ ಅನುದಾನ ಸದ್ಬಳಕೆ ಮಾಡಿಕೊಂಡು ಸುಂದರ ಶಿರಸಿ ಮಾಡಬೇಕು ಎಂಬುದು ಬಹುಕಾಲದ ಕನಸು. ಆದರೆ, ಅದಕ್ಕೆ ಪದೇ ಪದೇ ಏಟು ಬೀಳುತ್ತಿರುವುದು ಕಷ್ಟವಾಗಿದೆ. ಅದನ್ನು ಈಗಿನ ಹೊಸ ಅಧಿಕಾರಿಗಳ ಪಡೆ, ಜನಪ್ರತಿನಿಧಿಗಳು ನಿವಾರಿಸಬೇಕಿದೆ. ಶಿರಸಿ: ಜಿಲ್ಲಾ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿರುವ ಶಿರಸಿಯಲ್ಲೂ ನಗರಸಭೆ ಮೂಲಕ ನಗರದ ಅಭಿವೃದ್ಧಿ, ಮೂಲ ಸೌಲಭ್ಯ ಹೆಚ್ಚಳ ಕಾಮಗಾರಿಗೆ ಹಣ ಬಂದರೂ ಪೂರ್ಣ ಅನುಷ್ಠಾನಕ್ಕೆ ತೊಡಕಾದ ಪ್ರಸಂಗ ಬೆಳಕಿಗೆ ಬಂದಿದೆ.