Advertisement

ಒಣದ್ರಾಕ್ಷಿ ಬೆಳೆಗಾರರಿಗೆ 2 ಕೋಟಿ ರೂ ವಂಚನೆ: ಮಾಲು ಸಮೇತ ಗುಜರಾತ್ ವ್ಯಾಪಾರಿ ಬಂಧನ

02:14 PM Jul 04, 2022 | Team Udayavani |

ವಿಜಯಪುರ: ಜಿಲ್ಲೆಯ ರೈತರಿಂದ ಒಣದ್ರಾಕ್ಷಿ ಖರೀದಿಸಿ ಆನ್ ಲೈನ್ ಮೂಲಕ ಹಣ ಪಾವತಿಸುವ ಭರವಸೆ ಈಡೇರಿಸದೆ ಪರಾರಿಯಾಗಿದ್ದ ಗುಜರಾತ್ ಮೂಲದ ವ್ಯಾಪಾರಿಯನ್ನು ಬಂಧಿಸಿರುವ ಪೊಲೀಸರು, 2.2 ಕೋಟಿ ರೂ. ಮೌಲ್ಯದ 117 ಟನ್ ಒಣದ್ರಾಕ್ಷಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಶ್ರೀಮಹಾಲಕ್ಷ್ಮೀ ಟ್ರೇಡರ್ಸ್ ಹೆಸರಿನಲ್ಲಿ ದಾಸ್ತಾನು ಮಳಿಗೆ ತೆರೆದಿದ್ದ ಗುಜರಾತಿ ವ್ಯಾಪಾರಿಗಳಾದ ಅಹಮದಾಬಾದ್ ಮೂಲದ ಕಮಲಕುಮಾರ, ಕೃನಾಲಕುಮಾರ, ಸುನೀಲ, ಜಯೇಶ, ಭರತ ಪಟೇಲ, ರೋಹಿಣಿಕುಮಾರ ಪಟೇಲ, ನೀಲ್ ಪಟೇಲ, ಪಿಂಕೇಶ ಪಟೇಲ ಎಂಬ ವ್ಯಾಪಾರಿಗಳು ವಿಜಯಪುರ ದ್ರಾಕ್ಷಿ ಬೆಳೆಗಾರ ರೈತರು, ವ್ಯಾಪಾರಿಗಳಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಆನ್ ಲೈನ್ ಮೂಲಕ ಹಣ ಪಾವತಿಸುವುದಾಗಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ರೈತರಿಂದ ಒಣದ್ರಾಕ್ಷಿ ಖರೀದಿಸಿದ್ದರು. ಅಬ್ದುಲ್ ಖಾದರ ತಹಶೀಲ್ದಾರ ಎಂಬವರಿಂದ 9.440 ಟನ್ ತೂಕದ 18.19 ಲಕ್ಷ ರೂ. ಮೌಲ್ಯ, ಸಂತೋಷಕುಮಾರ ಸಿದ್ರಾಮಪ್ಪ ಗುಂಜಟಗಿ ಎಂಬವರಿಂದ 10.423 ಟನ್ ತೂಕದ 20.69 ಲಕ್ಷ ರೂ. ಮೌಲ್ಯದ ಒಣದ್ರಾಕ್ಷಿ, ತೌಫೀಕ್ ಸಲೀಂ ಅಂಗಡಿ ಎಂಬರಿಂದ 12.775 ಟನ್ ತೂಕದ 24.29 ಲಕ್ಷ ರೂ. ಮೌಲ್ಯದ ಒಣದ್ರಾಕ್ಷಿ, ಜಾಕೀರ ಹಾಜಿಲಾಲ್ ಭಾಗವಾನ್ ಇವರಿಂದ 11.54 ಟನ್ ತೂಕದ 21.59 ಲಕ್ಷ ರೂ. ಮೌಲ್ಯದ ಒಣದ್ರಾಕ್ಷಿ ಸೇರಿದಂತೆ ಸುಮಾರು 2.2 ಕೋಟಿ ರೂ. ಮೌಲ್ಯದ 117 ಟನ್ ಒಣದ್ರಾಕ್ಷಿ ಖರೀದಿಸಿ, ಒಂದು ತಿಂಗಳಲ್ಲಿ ಹಣ ಪಾವತಿಸುವ ಭರವಸೆ ನೀಡಿ, ಹಣ ನೀಡದೆ ಗುಜರಾತಿಗೆ ಪರಾರಿಯಾಗಿದ್ದರು.

ಅಬ್ದುಲ್ ತಹಶಿಲ್ದಾರ, ಸಂತೋಷಕುಮಾರ ಗುಂಜಟಗಿ, ತೌಫೀಕ್ ಅಂಗಡಿ, ಜಾಕೀರ ಬಾಗವಾನ ಇವರು ತಮಗೆ ಗುಜರಾತಿ ವ್ಯಾಪಾರಿಗಳು ವಂಚಿಸಿದ ಬಗ್ಗೆ ನಗರದ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ:“ಕಾಳಿ” ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಆಕ್ರೋಶ: ಲೀನಾ ಬಂಧನಕ್ಕೆ ಆಗ್ರಹ…ಏನಿದು ವಿವಾದ

Advertisement

ದೂರು ದಾಖಲಿಸಿಕೊಂಡ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಆನಂದಕುಮಾರ, ಡಿಎಸ್ಪಿ ಲಕ್ಷ್ಮೀನಾರಾಯಣ, ಸಿಪಿಐ ರಮೇಶ ಅವಜಿ, ಎಸೈ ಉಮೇಶ ಗೆಜ್ಜೆ ಹಾಗೂ ಇತರರಿದ್ದ ತನಿಖಾ ತಂಡ ರಚಿಸಿದ್ದರು.

ತಿಡಗುಂದಿ ಬಳಿ ಕೃನಾಲಕುಮಾರ ಪಟೇಲ್ ಎಂಬವನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಗುಜರಾತಿನ ಅಹಮದಾಬಾದ್ ನಲ್ಲಿ ಒಣದ್ರಾಕ್ಷಿಯನ್ನು ದಾಸ್ತಾನು ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಇದನ್ನು ಆಧರಿಸಿ ಗುಜರಾತಿನ ಅಹಮದಾಬಾದ್ ಗೆ ತೆರಳಿ ಅಲ್ಲಿ ದಾಸ್ತಾನು ಮಾಡಿದ್ದ 117 ಟನ್ ಒಣದ್ರಾಕ್ಷಿಯನ್ನು 8 ಲಾರಿಗಳಲ್ಲಿ ವಿಜಯಪುರ ನಗರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಕೃನಾಲ ಕುಮಾರ್ ಮಾತ್ರ ಬಂಧನವಾಗಿದ್ದು, ಇತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇತರೆ ಏಳು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾಗಿ ಎಸ್ಪಿ ಆನಂದಕುಮಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪ್ರಕರಣವನ್ನು ಯಶಸ್ವಿಯಾಗಿರುವ ತನಿಖಾ ತಂಡಕ್ಕೆ ಎಸ್ಪಿ ಆನಂದಕುಮಾರ ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next