ಶ್ರೀರಂಗಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆಚರಣೆಗೆ ಸರ್ಕಾರ 2 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಇಒ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಮೈಸೂರು ದಸರಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರೀರಂಗಪಟ್ಟಣ ದಸರಾ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಅಲ್ಲದೆ, ಶ್ರೀರಂಗಪಟ್ಟಣದ ಜಂಬೂ ಸವಾರಿ ಮೆರವಣಿಗೆಗೂ ಮೂರು ಆನೆಗಳು ಬರಲಿವೆ ಎಂದು ಹೇಳಿದರು.
ಅದ್ಧೂರಿ ದಸರಾ ಆಚರಣೆ: ಕಳೆದ ಬಾರಿ ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ಬಹಳಯಶಸ್ವಿಯಾಗಿ ನಡೆಸಲಾಗಿತ್ತು. ಇದು ಸರ್ಕಾರದ ಗಮನಕ್ಕೆ ಬಂದು ಈ ಬಾರಿ ಹೆಚ್ಚಿನ ಅನುದಾನ ನೀಡಲು ತೀರ್ಮಾನಿಸಿದೆ. ಮೈಸೂರು ದಸರಾಗೆ 16 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಲ್ಲದೆ, ಮೊದಲು ದಸರಾ ಆಚರಣೆ ಗೊಂಡ ಶ್ರೀರಂಗಪಟ್ಟಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಶ್ರೀರಂಗಪಟ್ಟಣದಲ್ಲಿ ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡಲಾಗು ವುದು ಎಂದು ಹೇಳಿದರು.
ಈಗಿನಿಂದಲೇ ದಸರಾ ಸಿದ್ಧತೆ: ಕಳೆದ ಬಾರಿ ದಸರಾ ಆಚರಣೆಗೆ ಸಮಯಾವಕಾಶಗಳು ಕಡಿಮೆ ಇದ್ದ ಕಾರಣ, ತರಾತುರಿಯಲ್ಲಿ ಸಿದ್ಧತೆ ನಡೆಸಲಾಯಿತು. ಸಿದ್ಧತೆಗಳ ಕೊರತೆಯಿಂದ ಅಂಬಾರಿ ಆನೆಗಳನ್ನು ಕರೆತರುವುದೂ ತಡವಾಯಿತು. ಈ ಬಾರಿ ಮೊದಲ ಸಭೆಯಲ್ಲಿ ಶ್ರೀರಂಗಪಟ್ಟಣ ದಸರಾ ಆಚರಣೆ ವಿಷಯ ಚರ್ಚೆಗೆ ಬಂದು ಮೂರು ಆನೆಗಳನ್ನು ಕಳುಹಿಸಲು ಸರ್ಕಾರವೇ ಹಸಿರು ನಿಶಾನೆ ತೋರಿದೆ. ಹಾಗಾಗಿ ಜನಾಕರ್ಷಣೆ ರೀತಿಯಲ್ಲಿ ದಸರಾ ಆಚರಿಸಲು ಸರ್ವಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ಮಟ್ಟದ ಸಭೆ: ದಸರಾ ಆಚರಣೆ ಸಂಬಂಧ ಶ್ರೀರಂಗಪಟ್ಟಣದಲ್ಲೂ ಪಟ್ಟಣದ ನಾಗರೀಕರು, ಪ್ರಜ್ಞಾವಂತರು, ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ಅಧಿಕಾರಿಗಳ ಮಟ್ಟದಲ್ಲಿ ಸಭೆ ಕರೆಯಲಾಗುವುದು. ದಸರಾ ಸಿದ್ಧತೆ ಹೇಗಿರಬೇಕು, ಯಾವ ಯಾವ ಕಲಾತಂಡಗಳನ್ನು ಎಲ್ಲೆಲ್ಲಿಂದ ಕರೆತರಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವ ರೀತಿ ರೂಪುಗೊಳ್ಳಬೇಕು ಎಂಬ ಬಗ್ಗೆ ಸಮಾ ಲೋಚನೆ ನಡೆಸಿ ದಸರಾ ಉತ್ಸವ ಆಚರಣೆಗೆ ವಿಶೇಷ ಮೆರುಗು ನೀಡಲಾಗುವುದು ಎಂದು ಹೇಳಿದರು. ಈ ವೇಳೆ ತಾಲೂಕು ಪಂಚಾ ಯಿತಿ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್, ತಾಲೂಕು ಪಂಚಾಯ್ತಿ ಸದಸ್ಯರು ಇತರ ಮುಖಂಡರು ಉಪಸ್ಥಿತರಿದ್ದರು.