ಚನ್ನಮ್ಮನ ಕಿತ್ತೂರು/ಬೆಳಗಾವಿ: ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಈ ಬಾರಿ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವನ್ನಾಗಿ
ಆಚರಿಸಲಾಗುತ್ತಿದ್ದು, ಸರ್ಕಾರ ಎರಡು ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಚನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವ ನಿಮಿತ್ತ ರಾಜ್ಯಾದ್ಯಂತ ಸಂಚರಿಸಲಿರುವ ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅ.2ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯಾದ್ಯಂತ ಚನ್ನಮ್ಮನ ವೀರಜ್ಯೋತಿಯಾತ್ರೆ ಸಂಚಾರ ಸೇರಿದಂತೆ ಎಲ್ಲ ಬೇಡಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ವೀರಜ್ಯೋತಿಯಾತ್ರೆ ಎಲ್ಲ ಜಿಲ್ಲೆಗಳಲ್ಲಿ ಅತ್ಯಂತ ಗೌರವಯುತವಾಗಿ ಸ್ವಾಗತಿಸಿ ಬೀಳ್ಕೊಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಲಿದೆ ಎಂದ ಅವರು, ಉತ್ಸವಕ್ಕೆ ಈಗಾಗಲೇ ಎರಡು ಕೋಟಿ ರೂ. ಅನುದಾನ ಮಂಜೂರಾಗಿದ್ದು ಅದರಲ್ಲಿ ಒಂದು ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ ಅನುದಾನ ಉತ್ಸವ ಆರಂಭಗೊಳ್ಳುವ ವೇಳೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಉತ್ಸವದಲ್ಲಿ ಮೂರು ವೇದಿಕೆ: ಈ ಬಾರಿ ಉತ್ಸವದಲ್ಲಿ ಮೂರು ವೇದಿಕೆ ನಿರ್ಮಿಸಲಾಗುವುದು. ಮಹಿಳೆಯರಿಗಾಗಿ ಒಂದು ದಿನ ಮೀಸಲಿಡಲು ನಿರ್ಧರಿಸಲಾಗಿದೆ. ಅದೇ ರೀತಿ ವಿವಿಧ ಬಗೆಯ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದ ಶಾಸಕರು, ಆಹಾರ, ಫಲಪುಷ್ಪ ಪ್ರದರ್ಶನ ಸೇರಿ ವಿವಿಧ ಬಗೆಯ ವಸ್ತುಪ್ರದರ್ಶನ ಮೇಳ ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದರು.
ಕಿತ್ತೂರು ಪಟ್ಟಣ ಮತ್ತು ಕೋಟೆ ಆವರಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಉತ್ಸವದಲ್ಲಿ ವಿವಿಧ ಸಮಿತಿಗಳಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಹೆಸರು ನೋಂದಾಯಿಸಲು ತಹಶೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಕಿತ್ತೂರು ಉತ್ಸವ ಮೊದಲ ಬಾರಿ ರಾಜ್ಯಮಟ್ಟದ ಉತ್ಸವವನ್ನಾಗಿ ಸಂಭ್ರಮದಿಂದ ಅಚರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾಂಸ್ಕೃತಿಕ ಸಮಿತಿ ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಗೆ ಅವಕಾಶ ನೀಡಲಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ರಾಷ್ಟ್ರಪತಿ ಅಥವಾ ಇತರೆ ಗಣ್ಯರನ್ನು ಆಹ್ವಾನಿಸುವ ಕುರಿತು ತೀರ್ಮಾನಿಸಲಾಗುವುದು. ಕೋಟೆ ಆವರಣದ ಸ್ವಚ್ಛತೆ ಕೆಲಸ ನಾಳೆಯಿಂದಲೇ ಆರಂಭಿಸಲಿದ್ದು ವರ್ಷವಿಡೀ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಮಡಿವಾಳೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಉತ್ಸವ ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. ಸಭೆಯಲ್ಲಿ ಜಿಪಂ ಸಿಇಒ ದರ್ಶನ್, ಡಿವೈಎಸ್ಪಿ ಶಿವಾನಂದ ಕಟಗಿ, ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳಿವೆಪ್ಪ ಉಳ್ಳಾಗಡ್ಡಿ, ಮುತ್ನಾಳ, ಡಿಡಿಪಿಐ ಬಸವರಾಜ ನಾಲತವಾಡ ಇದ್ದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು.
ಚನ್ನಮ್ಮ ಜನ್ಮಸ್ಥಳ ಅಭಿವೃದ್ಧಿ
ಕಾಕತಿಯಲ್ಲಿರುವ ಚನ್ನಮ್ಮನ ಜನ್ಮಸ್ಥಳವಾಗಿರುವ ವಾಡೆ ಖರೀದಿಸಲು ಸರ್ಕಾರ 30 ಲಕ್ಷ ರೂ. ಅನುದಾನ ಒದಗಿಸಿದೆ. ಇದರ ವಾರಸುದಾರರು ಬೇರೆಡೆ ಇದ್ದು ಅವರೊಂದಿಗೆ ಚರ್ಚೆ ನಡೆದಿದೆ. ಆದಷ್ಟು ಬೇಗನೇ ಈ ಜಾಗೆ ಖರೀದಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.