Advertisement

ವೈನೋತ್ಸವದಲ್ಲಿ 2 ಕೋಟಿ ವ್ಯಾಪಾರ ಮಾಡಿದ ರಾಜ್ಯ ದ್ರಾಕ್ಷಾರಸ ಮಂಡಳಿ

12:56 PM May 31, 2017 | |

ಬೆಂಗಳೂರು: ಕರ್ನಾಟಕ ದ್ರಾಕ್ಷಾ ರಸ ಮಂಡಳಿ ರಾಜ್ಯದ ಹಲವೆಡೆ ಈ ವರ್ಷ ಆಯೋಜಿಸಿದ್ದ ವೈನ್‌ ಉತ್ಸವಗಳಲ್ಲಿ ಈ ವರೆಗೆ ಸುಮಾರು ಎರಡು ಕೋಟಿ ರೂ.ಗೂ ಅಧಿಕ ಮಾರಾಟವಾಗಿದ್ದು ಕಳೆದ ವರ್ಷಕ್ಕಿಂದ ದುಪ್ಪಟ್ಟು ವಹಿವಾಟು ನಡೆದಿದೆ. ಎರಡು ಕೋಟಿ ರೂ. ವಹಿವಾಟಿನ ಪೈಕಿ ರಾಜಧಾನಿಯಲ್ಲೇ 65 ಲಕ್ಷ ರೂ. ವಹಿವಾಟು ನಡೆದಿರುವುದು ದಾಖಲೆ. ಸಿಲಿಕಾನ್‌ ಸಿಟಿಯಲ್ಲಿ ವೈನ್‌ ಪ್ರಿಯರು  ಹೆಚ್ಚಾಗಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 

Advertisement

ಇನ್ನುಳಿದಂತೆ ಬೆಳಗಾವಿಯಲ್ಲಿ (30 ಲಕ್ಷ ರೂ), ಹುಬ್ಬಳ್ಳಿ-ಧಾರವಾಡ (26 ಲಕ್ಷ ರೂ.), ಶಿವಮೊಗ್ಗ (19 ಲಕ್ಷ ರೂ.), ವಿಜಯಪುರ (13 ಲಕ್ಷ ರೂ.), ಮಂಗಳೂರು (23 ಲಕ್ಷ ರೂ.), ಪೆಣಂಬೂರು (24 ಲಕ್ಷ ರೂ.) ಸೇರಿದಂತೆ 1.35 ಕೋಟಿ ರೂ. ವಹಿವಾಟು ನಡೆದಿದೆ. ವೈನ್‌ ಉತ್ಸವದಲ್ಲಿ ರಾಜ್ಯದ ಬ್ಲಾಕ್‌ಬಕ್‌, ರೋಸೋ, ಎಸ್‌ಡಿಯು, ಹೆರಿಟೇಜ್‌, ಕೃಷ್ಣವ್ಯಾಲಿ, ಕೆಸ್ಟ, ಗ್ರೋವರ್‌ ಜಾಂಪ್‌, ನಿಸರ್ಗ, ಗೋಲ್ಡ್‌ಪಿಂಚ್‌, ಕ್ರಿಸ್ಮಾ, ಎಲೈಟ್‌ ಬ್ರ್ಯಾಂಡ್‌ಗಳು ಹಾಗೂ ಮಹಾರಾಷ್ಟ್ರ ಮತ್ತು ಗೋವಾದ ಸೂಲ, ಫ್ರೆಟಲಿ, ಓಕುಡ್‌ ವೈನರಿ, ಬಿಗ್‌ಬ್ಯಾನಿಯನ್‌ ವೈನ್‌ಗಳು ಹೆಚ್ಚು ಮಾರಾಟವಾಗಿವೆ.

ಕರ್ನಾಟಕ ದ್ರಾಕ್ಷಾರಸ ಮಂಡಳಿ 2016-17ನೇ ಸಾಲಿನಲ್ಲಿ ಅಂದಾಜು 1.10 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಖರ್ಚು ಮಾಡಿ, ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ವೈನ್‌ ಮೇಳ ಆಯೋಜನೆ ಮಾಡಿತ್ತು. ಈ ಬಾರಿ ವೈನ್‌ ಮೇಳದ ವಹಿವಾಟು ದ್ವಿಗುಣಗೊಂಡಿದ್ದಲ್ಲದೇ, ಸೂಲ, ಹೆರಿಟೇಜ್‌, ಗ್ರೋವರ್‌, ಕಾಬರ್ನೆಟ್‌ಸುವಿಗ್ನಾನ್‌, ಮೆರಿಯಟ್‌, ಶಿರಜ್‌, ಜಿನಾಲ್‌ ಮುಂತಾದ ವೈನ್‌ ಬ್ರಾಂಡ್‌ಗಳು ಅತೀಹೆಚ್ಚು ಮಾರಾಟವಾಗಿವೆ ಎಂದು ವೈನ್‌ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ತಿಳಿಸಿದ್ದಾರೆ. 

2015-16ನೇ ಸಾಲಿನಲ್ಲಿ ಕರ್ನಾಟಕ ದ್ರಾಕ್ಷಾ ರಸ ಮಂಡಳಿಯಿಂದ ಬೆಳಗಾವಿ, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮಾತ್ರ ವೈನ್‌ಮೇಳ ಆಯೋಜಿಸಲಾಗಿತ್ತು. ಆಗ ಕೇವಲ 96 ಲಕ್ಷ ರೂ.ಗಳಷ್ಟು ವಹಿವಾಟು ನಡೆದಿತ್ತು.  ಮಾರುಕಟ್ಟೆಯಲ್ಲಿ ದ್ರಾಕ್ಷಿಯ ಬೆಲೆ ಏರಿಳಿತಗಳಿಂದ ರೈತರು ಸದಾ ಆತಂಕದ ಸ್ಥಿತಿಯಲ್ಲಿ ಬದುಕುವಂತಾಗಿದೆ. ಇದನ್ನು ತಪ್ಪಿಸಲು ದ್ರಾಕ್ಷಿ ಮೌಲ್ಯವರ್ಧನೆ ಮಾಡುವುದು ಮತ್ತು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ರಾಕ್ಷಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ದ್ರಾಕ್ಷಾ ರಸ ಮಂಡಳಿ ವೈನ್‌ ಮೇಳ ಆಯೋಜಿಸುತ್ತಾ ಬರುತ್ತಿದೆ.

ಮೇಳದಲ್ಲಿ ವೈನರಿಗಳಿಗೆ ಸುಮಾರು 12ರಿಂದ 15 ಲಕ್ಷ ರೂ.ಖರ್ಚು ಮಾಡಿ ಉಚಿತವಾಗಿ ಮಳಿಗೆಗಳ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಜತೆಗೆ ಮಂಡಳಿಯೇ ಅಗತ್ಯ ಪ್ರಚಾರವನ್ನು ನೀಡುತ್ತಿದೆ. ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಆರೋಗ್ಯದಾಯಕ ವೈನ್‌ ಅನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ದ್ರಾಕ್ಷಿ ಮಂಡಳಿ ಕೆಲಸ ಮಾಡುತ್ತಿದೆ. ದ್ರಾಕ್ಷಿ ಉತ್ಪಾದನೆ ಮತ್ತು ವೈನ್‌ಗೆ ಉತ್ತಮ ಮಾರುಕಟ್ಟೆ ಒದಗಿಸುವಲ್ಲಿ ಮಂಡಳಿ ಯಶಸ್ವಿಯಾಗಿದ್ದು, ಪ್ರತಿ ವರ್ಷ ಸರಾಸರಿ ಶೇ.30ರಷ್ಟು ವೈನ್‌ ಮಾರಾಟ ಹೆಚ್ಚುತ್ತಿದೆ ಎಂದು ವೈನ್‌ ಮಂಡಳಿ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ ತಿಳಿಸಿದ್ದಾರೆ. 

Advertisement

ವೈನ್‌ ಮಾರುಕಟ್ಟೆ ಅಭಿವೃದ್ಧಿ: ವರ್ಷದಿಂದ ವರ್ಷಕ್ಕೆ ವೈನ್‌ ಉದ್ಯಮ ಅಭಿವೃದ್ಧಿಯಾಗುತ್ತಿದೆ. 2007-08ರಲ್ಲಿ ಕೇವಲ 13.72 ಲಕ್ಷ ಲೀಟರ್‌ ಮಾರಾಟವಾಗುತ್ತಿದ್ದ ವೈನ್‌ 2012-13ರಲ್ಲಿ ಸುಮಾರು 40.71 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಅಲ್ಲದೇ ಸರ್ಕಾರಕ್ಕೆ 114.9 ಕೋಟಿ ರೂ.ಲಾಭ ತಂದಿತ್ತು. ವೈನ್‌ ಮಾರಾಟದ ಪ್ರಮಾಣ 2015-16ರಲ್ಲಿ 74 ಲಕ್ಷ ಲೀಟರ್‌ ತಲುಪಿದ್ದು, ಸರ್ಕಾರಕ್ಕೆ 198 ಕೋಟಿ ರೂ.ಲಾಭ ತಂದುಕೊಟ್ಟಿದೆ ಎಂದು ಕರ್ನಾಟಕ ರಾಜ್ಯ ಪಾನೀಯಗಳ ನಿಗಮದ ವರದಿ ಸ್ಪಷ್ಟಪಡಿಸಿದೆ. ಪ್ರಸ್ತುತ 2016-17ನೇ ಸಾಲಿನಲ್ಲಿ ವೈನ್‌ ಮಾರಾಟದಲ್ಲಿ ಶೇ.35ಕ್ಕಿಂತ ಹೆಚ್ಚು ಅಭಿವೃದ್ಧಿಯಾಗಿದ್ದು, 85 ಲಕ್ಷ ಲೀಟರ್‌ಗೂ ಅಧಿಕ ವೈನ್‌ ಮಾರಾಟವಾಗಿ, ಸುಮಾರು 210 ಕೋಟಿಗಿಂತ ಜಾಸ್ತಿ ಲಾಭ ಬಂದಿರಬಹುದೆಂದು ಅಂದಾಜಿಸಲಾಗಿದೆ.

ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡುವುದು ಮತ್ತು ವೈನ್‌ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ವೈನ್‌ಮೇಳ ಸಹಕಾರಿಯಾಗಿದೆ. ಈ ಬಾರಿ ವೈನ್‌ ಮೇಳಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದೆ. ಹಾನಿಕಾರವಾದ ಮದ್ಯಕ್ಕಿಂತ ಮಿತವಾಗಿ ವೈನ್‌ ಸೇವಸುವುದು ಆರೋಗ್ಯಕ್ಕೆ ಪೂರಕ. ಉದ್ಯಮದ ಅಭಿವೃದ್ಧಿ ಹೆಚ್ಚಿಸಲು ಮಂಡಳಿ ಕಾರ್ಯೋನ್ಮುಖವಾಗಿದೆ.
-ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ದ್ರಾಕ್ಷಾರಸ ಮಂಡಳಿ 

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next