ಜಮ್ಮು-ಕಾಶ್ಮೀರ: ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಪೊಲೀಸರು ಹಾಗೂ ಇಬ್ಬರು ನಾಗರಿಕರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರೆಯಲ್ಲಿ ಶನಿವಾರ(ಜೂನ್ 12) ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಲೆಯೇರಿಕೆಯಾಗುತ್ತಿದ್ದರೂ ‘ಅಚ್ಚೇ ದಿನ್ ಆಯೇಗಾ’ ಎಂದು ಬಿಜೆಪಿ ಜಪ: ಕಾಂಗ್ರೆಸ್ ಆರೋಪ
ಶಂಕಿತ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಪೊಲೀಸರು, ನಾಗರಿಕರೊಬ್ಬರು ಗಾಯಗೊಂಡಿರುವುದಾಗಿ ಭದ್ರತಾ ಪಡೆಯ ಅಧಿಕಾರಿಗಳು ವಿವರಿಸಿದ್ದಾರೆ. ಮೂಲಗಳ ಪ್ರಕಾರ, ಶನಿವಾರ ಉತ್ತರ ಕಾಶ್ಮೀರದ ಸೋಪೋರೆ ಮತ್ತು ಅರಾಂಪೋರಾ ಪ್ರದೇಶದಲ್ಲಿ ಪೊಲೀಸರು ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿರುವುದಾಗಿ ತಿಳಿಸಿದೆ.
ದಾಳಿಯಲ್ಲಿ ಇಬ್ಬರು ಪೊಲೀಸರು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದ ಘಟನೆ ನಂತರ ಇಡೀ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಭಯೋತ್ಪಾದಕರನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಮುಂದುವರಿದಿರುವುದಾಗಿ ವರದಿ ವಿವರಿಸಿದೆ.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರ ಭಯೋತ್ಪಾದಕರ ಅಟ್ಟಹಾಸಕ್ಕೆ ಕಡಿವಾಣ ಬಿದ್ದಿದ್ದು, ಏತನ್ಮಧ್ಯೆ ಉಗ್ರರು ಗಡಿ ಹಾಗೂ ಆಯಕಟ್ಟಿನ ಸ್ಥಳದಲ್ಲಿ ಅಡಗಿ ಕುಳಿತುಕೊಳ್ಳುವ ಮೂಲಕ ಭದ್ರತಾಪಡೆ, ಪೊಲೀಸರ ಮೇಲೆ ದಾಳಿ ನಡೆಸುತ್ತಿರುವ ಘಟನೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.