ಕೂಡ್ಲಿಗಿ: ಎರಡು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಸಿಪಿಐ ವಸಂತ ವಿ. ಅಸೋದೆ ನೇತೃತ್ವದಲ್ಲಿ ಒಂದು ತಿಂಗಳ ಅವಧಿಯಲ್ಲಿ ತಂಡ ರಚನೆ ಮಾಡಿ ಗುರುವಾರ ಬೆಳಗ್ಗೆ ಅಂತರ್ ಜಿಲ್ಲಾ ಮನೆ ಕಳ್ಳನನ್ನು ಬಂಧಿಸಿ ಆತನಿಂದ ಕಳುವು ಮಾಡಿದ ಬಂಗಾರ ಹಾಗೂ ಬೆಳ್ಳಿ ಆಭರಣವನ್ನು ಹಾಗೂ ನಗದು ಹಣ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೊಟ್ಟೂರು ತಾಲೂಕಿನ ಬೈರಾದೇವರಗುಡ್ಡದ ಹನುಮಂತ (23) ಆರೋಪಿಯಾಗಿದ್ದು, ಈಗ ಸೆರೆಮನೆಯಲ್ಲಿದ್ದಾನೆ. ಪಟ್ಟಣದ ಎರಡು ಮನೆಕಳ್ಳತನ ಪ್ರಕರಣ ಒಂದು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಬೆಳಗ್ಗೆ 5 ಗಂಟೆಗೆ ಪಟ್ಟಣದಲ್ಲಿ ಬಂಧಿಸಲಾಯಿತು.
ಕೂಡ್ಲಿಗಿ ಸಿಪಿಐ ವಸಂತ ವಿ. ಆಸೋದ ನೇತೃತ್ವದಲ್ಲಿ ಕೂಡ್ಲಿಗಿ ತನಿಖಾ ಪಿಎಸ್‌ಐ ಮಾಲೀಕ್ ಸಾಹೇಬ್ ಕಲಾರಿ, ಕಾನೂನು ಸುವ್ಯವಸ್ಥೆ ಪಿಎಸ್‌ಐ ಧನಂಜಯ. ಕ್ರೈಂ ಸಿಬ್ಬಂದಿ ರಾಘವೇಂದ್ರ, ತಿಪ್ಪೇಸ್ವಾಮಿ, ಚಂದ್ರಮೌಳ, ವಿಜಯಕುಮಾರ, ಲಕ್ಕಪ್ಪ, ಪ್ರಾಣೇಶ, ಮಡ್ಡಿ, ಶಿವಕುಮಾರನ್ನೊಳಗೊಂಡ ಕ್ರೈಂ ಪತ್ತೆ ರಚಿಸಿ ಪತ್ತೆ ಕಾರ್ಯ ನಡೆಸುವಾಗ ಆರೋಪಿ ಸುಳಿವು ಹಿಡಿದು ಮೇ 19ರಂದು ಬಂಧಿಸಿದ್ದಾರೆ. ನಂತರ ವಿಚಾರಿಸಿದಾಗ ಆರೋಪಿ 3 ಮನೆಗಳನ್ನು ಈಗಾಗಲೇ ಕಳ್ಳತನವನ್ನು ಮಾಡಿರುತ್ತೇನೆ ಎಂದು ತಿಳಿಸಿರುತ್ತಾನೆ. ಆರೋಪಿಯಿಂದ 93 ಗ್ರಾಂ ಬಂಗಾರ, 103 ಗ್ರಾಂ ಬೆಳ್ಳಿ ಮತ್ತು 2600 ವಶಪಡಿಸಿಕೊಂಡಿದ್ದಾರೆ.