ಶೋಪಿಯಾನ್:ಅಲ್ ಬದ್ರ್ ಉಗ್ರಗಾಮಿ ಸಂಘಟನೆಯ ಇಬ್ಬರನ್ನು ಭದ್ರತಾ ಪಡೆ ಶನಿವಾರ (ಡಿಸೆಂಬರ್ 26, 2020) ಜಮ್ಮು-ಕಾಶ್ಮೀರದ ಶೋಫಿಯಾನ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಈ ಘಟನೆಯನ್ನು ಖಚಿತಪಡಿಸಿರುವ ಜಮ್ಮು-ಕಾಶ್ಮೀರದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ದಿಲ್ಬಾಗ್ ಸಿಂಗ್, ಈ ಸಂದರ್ಭದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಯೋಧರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೀಬ್ ಪ್ರದೇಶ ಕಾನಿಗಮ್ ಗ್ರಾಮದ ಬಳಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಪೊಲೀಸರು, ಸೇನೆ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಸ್ಥಳವನ್ನು ಸುತ್ತುವರಿದು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಇಬ್ಬರೂ ಅಲ್ ಬದ್ರ್ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿದ್ದಾರೆ ಎಮದು ದಿಲ್ಬಾಗ್ ಸಿಂಗ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ. ಸ್ಥಳದಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರಿದಿದ್ದು, ಹೆಚ್ಚಿನ ಯೋಧರನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರ, ದಿಲ್ಬಾಗ್ ಸಿಂಗ್, ಅಲ್ ಬದ್ರ್, ಉಗ್ರಗಾಮಿ ಸಂಘಟನೆ, Jammu Kashmir, Al badr terrorists, Dilbag singh, Udayavani kannada news