Advertisement

ಐಟಿಬಿಪಿ ಕ್ಯಾಂಪ್‌ನಲ್ಲಿ 2ಎಕೆ-47 ರೈಫಲ್‌ ಕಳವು: ಯೋಧರು ಮಲಗಿದ್ದಾಗ ನಡೆದ ಘಟನೆ

08:05 PM Aug 19, 2022 | Team Udayavani |

ಬೆಳಗಾವಿ: ತಾಲೂಕಿನ ಹಾಲಬಾವಿ ಬಳಿ ಇರುವ ಐಟಿಬಿಪಿ ಕ್ಯಾಂಪ್‌ನಲ್ಲಿ ನಕ್ಸಲ್‌ ನಿಗ್ರಹ ತರಬೇತಿ ಪಡೆಯುತ್ತಿದ್ದ ಯೋಧರ ಬಳಿ ಇದ್ದ ಎರಡು ಎಕೆ-47 ರೈಫಲ್‌ಗ‌ಳು ಕಳ್ಳತನವಾದ ಘಟನೆ ಬೆಳಕಿಗೆ ಬಂದಿದೆ.

Advertisement

ಮಧುರೈನ 15ನೇ ಬಟಾಲಿಯನ್‌ ಯೋಧರಾದ ರಾಜೇಶಕುಮಾರ ಹಾಗೂ ಸಂದೀಪ ಮೀನಾ ನಕ್ಸಲ್‌ ನಿಗ್ರಹ ತರಬೇತಿ ಪಡೆಯುತ್ತಿದ್ದರು. ಆ.17ರಂದು ತಮ್ಮ ಬಳಿ ಎಕೆ-47 ರೈಫಲ್‌ ಇಟ್ಟುಕೊಂಡು ಮಲಗಿದ್ದಾಗ ಕಳ್ಳತನವಾಗಿದೆ. ಮಧ್ಯರಾತ್ರಿ 1.40ರಿಂದ ಬೆಳಗಿನ ಜಾವ 4.40ರ ಅವಧಿಯಲ್ಲಿ ಕಳ್ಳತನವಾಗಿದೆ. ಬೆಳಗ್ಗೆ ಎದ್ದು ನೋಡಿದಾಗ ರೈಫಲ್‌ ಇಲ್ಲದಿದ್ದಕ್ಕೆ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಐಟಿಬಿಪಿಯ ಎಲ್ಲ ವಿಭಾಗಗಳಲ್ಲಿ ಹುಡುಕಾಡಿದರೂ ರೈಫಲ್‌ ಮಾತ್ರ ಪತ್ತೆ ಆಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿ ರೇಘುಕುಮಾರ ವಿ. ದೂರು ನೀಡಿದ್ದಾರೆ.

ಬೆಚ್ಚಿಬಿದ್ದ ಅಧಿಕಾರಿಗಳು ಕೂಡಲೇ ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಗಿ ಭದ್ರತೆ ಮಧ್ಯೆಯೂ ರೈಫಲ್‌ ಕಳ್ಳತನ ಆಗಿರುವುದರಿಂದ ಹಲವು ಸಂಶಯಕ್ಕೆಡೆ ಮಾಡಿಕೊಟ್ಟಿದೆ.

ಎರಡು ದಿನಗಳಿಂದ ರೈಫಲ್‌ ಶೋಧ ಕಾರ್ಯ ನಿರಂತರ ನಡೆದಿದೆ. ಕೆಲವು ಯೋಧರ ವಿಚಾರಣೆಯೂ ನಡೆದಿದೆ. ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹ ನೇತೃತ್ವದಲ್ಲಿ ಗ್ರಾಮೀಣ ಎಸಿಪಿ, ಕಾಕತಿ ಇನ್ಸ್‌ಪೆಕ್ಟರ್‌ ತನಿಖೆ ನಡೆಸಿದ್ದಾರೆ. ಎಕೆ-47 ರೈಫಲ್‌ ಕಳ್ಳತನ ಆಗಿರುವ ಬಗ್ಗೆ ಸೂಕ್ಷ್ಮವಾಗಿ ತನಿಖೆ ಮುಂದುವರಿದಿದೆ. ಸಿಸಿ ಕ್ಯಾಮೆರಾಗಳ ಪರಿಶೀಲನೆ ಕಾರ್ಯ ನಡೆದಿದೆ. ರಕ್ಷಣಾ ಇಲಾಖೆ ವಿಷಯ ಆಗಿರುವುದರಿಂದ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ರೈಫಲ್‌ ಮಾತ್ರ ಕಳ್ಳತನ ಆಗಿದ್ದು, ಗುಂಡುಗಳು ಇರಲಿಲ್ಲ ಎಂದು ಡಿಸಿಪಿ ಪಿ.ವಿ. ಸ್ನೇಹ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next