Advertisement

ನುಡಿಸಿರಿಯಲ್ಲಿ  2 ಎಕರೆ ತರಕಾರಿ ತೋಟ ! 

01:07 PM Nov 29, 2017 | |

ಮಂಗಳೂರು: ಸಾಹಿತ್ಯ-ಸಂಸ್ಕೃತಿ ಹಬ್ಬ ಆಳ್ವಾಸ್‌ ನುಡಿಸಿರಿಯಲ್ಲಿ ಈ ಬಾರಿ ವಿಶೇಷ ಮೆರುಗು ಎಂದರೆ ತರಕಾರಿ ತೋಟ! ಎರಡು ಎಕರೆಯಲ್ಲಿ ನಳನಳಿಸುವ ತರಕಾರಿ ಗಿಡಗಳು ಬೆಳೆದು ನಿಂತಿದ್ದು ನುಡಿಸಿರಿಯ ಸಂದರ್ಭ ಜನಾಕರ್ಷಣೆಯ ಕೇಂದ್ರವಾಗಲಿದೆ.

Advertisement

ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಮುಂಡ್ರುದೆಗುತ್ತು ರಾಮಮೋಹನ ರೈ ಕೃಷಿ ಆವರಣದಲ್ಲಿ ನಾನಾ ಬಗೆಯ ತರಕಾರಿ ಹಾಗೂ ಹಣ್ಣು-ಹಂಪಲು ಬೆಳೆದು ನಿಂತಿವೆ. ಕೃಷಿ ವಸ್ತು ಪ್ರದರ್ಶನಕ್ಕಾಗಿಯೇ ಮೂರ್‍ನಾಲ್ಕು ತಿಂಗಳ ನಿರಂತರ ಪರಿಶ್ರಮದಿಂದ ಸುಂದರ ತರಕಾರಿ ತೋಟವನ್ನು ನಿರ್ಮಿಸಲಾಗಿದೆ. ನೀರಿನ ತೇವಾಂಶವೇ ಇಲ್ಲದ ಕ್ರೀಡಾಂಗಣದಲ್ಲಿ ತಾತ್ಕಾಲಿಕ ನೀರಿನ ಸೌಲಭ್ಯ ಪಡೆದು ತರಕಾರಿ, ಹಣ್ಣುಗಳನ್ನು ಬೆಳೆಸಲಾಗಿದೆ. ಆ ಮೂಲಕ ನುಡಿಸಿರಿಗೆ ಬರುವ ಕಲಾಸಕ್ತರು, ಸಾಹಿತ್ಯಾಸಕ್ತರು, ಕೃಷಿ ಆಸಕ್ತರಿಗೆ ಕೃಷಿ ಬಗ್ಗೆ ಮಾಹಿತಿ, ಅನುಭವ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 

ನ. 30ರಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಆಳ್ವಾಸ್‌ ಕೃಷಿಸಿರಿಗೆ ಚಾಲನೆ ನೀಡಲಿದ್ದು, ಆ ದಿನದಿಂದ ಈ ತರಕಾರಿ ತೋಟ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. 6 ಎಕರೆ ಜಾಗದಲ್ಲಿ ಕೃಷಿ ಸಿರಿ ಇರಲಿದ್ದು, ಎರಡು ಎಕರೆಯಲ್ಲಿ ತರಕಾರಿ ಕೃಷಿ, ಹೂವಿನ ಕೃಷಿ ಮಾಡಲಾಗಿದೆ. 

ಸೊರೆ, ಹೀರೆ, ತೊಂಡೆ, ಬೆಂಡೆ ..
ಊರಿನ ಸಾಂಪ್ರದಾಯಿಕ ಹಾಗೂ ಸುಧಾರಿತ ರೀತಿಯಲ್ಲಿ ತರಕಾರಿಗಳನ್ನು ಬೆಳೆಸಲಾಗಿದೆ. ಹಚ್ಚಹಸಿರಿನ ದಟ್ಟ ಬಳ್ಳಿಗಳ ಚಪ್ಪರಗಳಲ್ಲಿ ಜೋಕಾಲಿಯಾಡುತ್ತಿರುವ ವಿವಿಧ ಗಾತ್ರಗಳ ಸೋರೆ ಕಾಯಿ, ಪಡುವಲ ಕಾಯಿ, ಹಾಗಲಕಾಯಿ, ಸೌತೆಕಾಯಿ, ಮುಳ್ಳುಸೌತೆ, ನೆಲದ ಮೇಲೆ ಹರಡಿದ ಕುಂಬಳಕಾಯಿ, ಚೀನಿಕಾಯಿ, ಗಿಡಗಳಲ್ಲಿ ಮುತ್ತಿಕೊಂಡಿರುವ ತೊಂಡೆ, ಬೆಂಡೆ, ಅಲಸಂಡೆ, ಅನಾನಸು, ಹರಡಿಕೊಂಡಿರುವ ಹರಿವೆ, ಬಸಳೆ, ಮೆಣಸು, ಕ್ಯಾಪ್ಸಿಕಮ್‌ ಒಂದೆಡೆಯಾದರೆ, ಇನ್ನೊಂದೆಡೆ ಗೊಂಡೆ, ಸೇವಂತಿಗೆ ಹೂವುಗಳ ರಾಶಿ. ನೋಡುತ್ತಿದ್ದರೆ ನಾವೂ ಯಾಕೆ ಕೃಷಿ ಮಾಡಬಾರದು ಎಂದು ಅನಿಸುವಂತಿದೆ. 

ಬೊನ್ಸಾಯಿ ಕೃಷಿ, ಗೆಡ್ಡೆ ಗೆಣಸು 
ತರಕಾರಿ, ಹೂವು ಕೃಷಿಗಳಲ್ಲದೆ 50ಕ್ಕೂ ಮಿಕ್ಕಿ ಬೊನ್ಸಾಯಿ ಕೃಷಿಗಳ ಪ್ರದರ್ಶನ ಇಲ್ಲಿದೆ. ಸುಮಾರು 44 ತಳಿಗಳ ಬಿದಿರು ಗಿಡಗಳು ಹಾಗೂ 40 ತಳಿಗಳ ಬಿದಿರು ಪ್ರದರ್ಶಿಸಲಾಗುತ್ತಿದೆ. ವಿವಿಧ ಗೆಡ್ಡೆಗೆಣಸುಗಳ ಅಪೂರ್ವ ಪ್ರದರ್ಶನವಿದೆ. ನ್ಯೂಜಿಲ್ಯಾಂಡ್‌ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣದ ಸಸ್ಯಗಳ ಪರಿಚಯ ಮಾಡಿಕೊಡಲಾಗುತ್ತಿದೆ. ತರಕಾರಿ ಮತ್ತು ಹಣ್ಣುಗಳಲ್ಲಿ ಕಲಾಕೃತಿ ರಚನೆ, ಕೃಷಿ ಸಂಬಂಧಿ ಗುಡಿಕೈಗಾರಿಕೆಗಳು ವಿಶೇಷ ಆಕರ್ಷಣೆಯಾಗಲಿವೆ. ಕೃಷಿಸಂಬಂಧಿತ ಸುಮಾರು 300 ಮಳಿಗೆಗಳೂ ಇರಲಿವೆ. 

Advertisement

ಮೊದಲ ಬಾರಿಗೆ ಕಂಬಳ ಕೋಣ ಸೌಂದರ್ಯ ಸ್ಪರ್ಧೆ
ಆಳ್ವಾಸ್‌ ಕೃಷಿಸಿರಿಯಲ್ಲಿ ಕಂಬಳ ಕೋಣಗಳ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಇಂತಹ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲ ಬಾರಿ. ಡಿ. 1ರಂದು ಸಂಜೆ 4.30ರಿಂದ 6ರವರೆಗೆ ಈ ಸೌಂದರ್ಯ ಸ್ಪರ್ಧೆಯಿದ್ದು ವಿಜೇತ ಕೋಣಗಳಿಗೆ 50,000, 30,000 ಮತ್ತು 20,000 ರೂ. ಬಹುಮಾನಗಳಿವೆ. ಕೋಣಗಳ ದೇಹಸೌಂದರ್ಯ, ಕೋಣಗಳ ನಡಿಗೆಯ ಗತ್ತು , ವೇಷಭೂಷಣಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ. ನಾಲ್ಕು ಮಂದಿ ತೀರ್ಪುಗಾರರು ವಿಜೇತರನ್ನು ನಿರ್ಧರಿಸುತ್ತಾರೆ. ಇದೇ ರೀತಿ ಕೋಣ ಓಡಿಸುವವರ ಸೌಂದರ್ಯ ಸ್ಪರ್ಧೆಯೂ ಇದ್ದು 10,000 ಮತ್ತು 7,000 ರೂ. ಬಹುಮಾನಗಳನ್ನು ´ೋಷಿಸಲಾಗಿದೆ.

ಜಾನುವಾರು ಪ್ರದರ್ಶನ 
ಕೃಷಿ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾನುವಾರು ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೆಕ್ಕು, ಶ್ವಾನ ಸೌಂದರ್ಯ ಪ್ರದರ್ಶನವಿದೆ. 600ಕ್ಕೂ ಮಿಕ್ಕಿ ಬೃಹತ್‌ ಮತ್ಸಾಲಯಗಳ ಮೂಲಕ ಮತ್ಸé ಪ್ರದರ್ಶನ 500ಕ್ಕೂ ಮಿಕ್ಕಿ ಸಮುದ್ರ ಚಿಪ್ಪುಗಳ ಪ್ರದರ್ಶನ, ವಿದೇಶಿ ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡಲಿದೆ. 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next