Advertisement

ಸಂಪರ್ಕ ಮಾರ್ಗ: 2.87 ಕೋಟಿ ರೂ. ಚರಂಡಿ ಪಾಲು!

12:29 AM Nov 12, 2019 | Sriram |

ಸುಳ್ಯ: ನಗರದ ತ್ಯಾಜ್ಯ ನೀರು ಸಂಸ್ಕರಿಸಿ ಮರು ಬಳಸುವ ಉದ್ದೇಶದಿಂದ 2.87 ಕೋಟಿ ರೂ. ವಿನಿಯೋಗಿಸಿದ ಒಳಚರಂಡಿ ಸಂಪರ್ಕ ಮಾರ್ಗ ಸಂಪೂರ್ಣ ಅವೈಜ್ಞಾನಿಕವಾಗಿರುವ ಕಾರಣ ಕೊನೆಯ ಪ್ರಯತ್ನವಾಗಿದ್ದ ದುರಸ್ತಿ ನಿರೀಕ್ಷೆ ಕೂಡ ಬಹುತೇಕ ಕಮರಿ ಹೋಗಿದೆ.

Advertisement

ಹೀಗಾಗಿ ವ್ಯಯಿಸಿದ ಕೋಟಿಗಟ್ಟಲೆ ಹಣ ಪೋಲಾದಂತಾಗಿದೆ. ಹಲವು ವರ್ಷಗಳಿಂದ ಒಳಚರಂಡಿ ಯೋಜನೆ ಅವ್ಯವಸ್ಥೆ ಗೂಡಾಗಿ, ಅಲ್ಲಲ್ಲಿ ಕೊಳಚೆ ನೀರು ಚರಂಡಿ ಪಾಲಾದರೆ, ಶುದ್ಧೀಕರಣ ಘಟಕದ ಸನಿಹದ ನೂರಾರು ಮನೆ ಮಂದಿ ಮೂಗು ಮುಚ್ಚಿ ದಿನ ಕಳೆಯುವ ಸ್ಥಿತಿ ಉಂಟಾಗಿದೆ.

ಹೊಸ ಮಾರ್ಗವೇ ಗತಿ
ಹಳೆ ಮಾರ್ಗ ದುರಸ್ತಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದರೂ ಯಶಸ್ಸು ಕಂಡಿಲ್ಲ. ರೂಟ್‌, ವೆಟ್‌ವೆಲ್‌ಗ‌ಳು ಸಮರ್ಪಕ ಅನುಷ್ಠಾನ ಆಗದಿರುವುದು ಇದಕ್ಕೆ ಕಾರಣ. ಈಗಿನ ಸ್ಥಿತಿಯಲ್ಲಿ ದುರಸ್ತಿ ಮಾಡಿದರೆ ತ್ಯಾಜ್ಯ ನೀರು ಘಟಕಕ್ಕೆ ಪೂರೈಕೆ ಆಗದು ಎನ್ನುತ್ತಿದೆ ಸರ್ವೆ ಕಾರ್ಯ. ತ್ಯಾಜ್ಯ ನೀರು ಹರಿಯುವ ಆರಂಭದ ಬಿಂದುವಿನಿಂದ ಘಟಕಕ್ಕೆ ಸೇರುವ ಕೊನೆಯ ಬಿಂದುವಿನ ತನಕ ಮುಮ್ಮುಖವಾಗಿ ಚಲಿಸಬೇಕಿದ್ದ ಮಾರ್ಗದಲ್ಲಿ ಏರಿಳಿತ ಇರುವ ಕಾರಣ ತ್ಯಾಜ್ಯ ನೀರು ಅಲ್ಲಲ್ಲಿ ಉಕ್ಕಿ ಹೊರಬರುತ್ತಿದೆ. ಜಟ್ಟಿಪಳ್ಳ ಬಳಿ ನಿರ್ಮಿಸಿದ ವೆಟ್‌ವೆಲ್‌ ಪ್ರದೇಶ ಒರತೆ ಸ್ಥಳವಾಗಿದ್ದು, ಅಲ್ಲಿ ಮಳೆಗಾಲದಲ್ಲಿ ತ್ಯಾಜ್ಯ ನೀರಿನ ಜತೆ ಮಳೆ ನೀರು ಉಕ್ಕಿ ಪರಿಸರದ ಎಲ್ಲೆಡೆ ದುರ್ನಾತ ಬೀರುತ್ತದೆ. ಆ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಿದರೂ ಫಲಪ್ರದವಾಗಿಲ್ಲ.

ಹರಿಯದ ತ್ಯಾಜ್ಯ
ಕಾಮಗಾರಿಯಾಗಿ 16 ವರ್ಷಗಳಾದರೂ ಅವೈಜ್ಞಾನಿಕ ಅನುಷ್ಠಾನ ಕಾರಣ ಚರಂಡಿಯಲ್ಲಿ ತ್ಯಾಜ್ಯ ಹರಿಯಲಿಲ್ಲ. 4,000ಕ್ಕೂ ಅಧಿಕ ಗೃಹ ಮತ್ತು ಗೃಹೇತರ ಕಟ್ಟಡಗಳ ತ್ಯಾಜ್ಯವನ್ನು ಅಧಿಕೃತವಾಗಿ ಚರಂಡಿಗೆ ಹರಿಸಲು ಇನ್ನೂ ಶಕ್ತವಾಗಿಲ್ಲ. ವಲಯ – 2ರಲ್ಲಿ ಪರಿವೀಕ್ಷಣೆಗೆಂದು ಕೆಲವು ಭಾಗದಲ್ಲಿ ಕನೆಕ್ಷನ್‌ ನೀಡಿದ ವೇಳೆ ಕಾಮಗಾರಿ ಲೋಪ ಬೆಳಕಿಗೆ ಬಂದಿದೆ. ಹೀಗಾಗಿ ನಿರ್ವಹಣೆ ಹೊತ್ತ ಒಳಚರಂಡಿ ಮಂಡಳಿ ದುರಸ್ತಿ ಬಗ್ಗೆ ಆಸಕ್ತಿ ಹೊಂದಿಲ್ಲ. ಪ್ರತಿ ಸಾಮಾನ್ಯ ಸಭೆಗಳಲ್ಲಿ ಒಳಚರಂಡಿ ವಿಷಯ ಚರ್ಚಾ ವಸ್ತುವಾಗಿಬಿಟ್ಟರೆ ಮತ್ತೇನೂ ಪ್ರಯೋಜನವಾಗಿಲ್ಲ.

ಹೀಗೆ ಸಾಗಿತ್ತು
ನಗರದ ಎರಡು ವಲಯ ಆಯ್ದು ಕೊಂಡು ಈ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ವಲಯ-1ರಲ್ಲಿ ಚೆನ್ನಕೇಶವ ದೇವಾಲಯ ದಿಂದ -ವಿವೇಕಾನಂದ ವೃತ್ತ, ಕೇರ್ಪಳ ವೃತ್ತದಿಂದ – ಟೌನ್‌ಹಾಲ್‌, ಟೌನ್‌ಹಾಲ್‌ನಿಂದ – ಕೆಇಬಿ ರಸ್ತೆ, ತಾ.ಪಂ. ಕಚೇರಿ ರಸ್ತೆಯಿಂದ ಚೆನ್ನಕೇಶವ ಸರ್ಕಲ್‌, ಅಂಬೆಟಡ್ಕದಿಂದ ತಾ.ಪಂ. ರಸ್ತೆ ಹಾಗೂ ವಲಯ-2ರಲ್ಲಿ ಗಾಂಧಿನಗರ – ಜ್ಯೋತಿ ಸರ್ಕಲ್‌, ಜೂನಿಯರ್‌ ಕಾಲೇಜು ವೃತ್ತ ದಿಂದ ತಾಲೂಕು ಕಚೇರಿ ರಸ್ತೆ, ಚೆನ್ನಕೇಶವ ದೇವಾಲಯದಿಂದ – ಚೆನ್ನ ಕೇಶವ ದೇವರ ಕಟ್ಟೆ ತನಕ ಒಳಚರಂಡಿ ಮಾರ್ಗವಿದೆ.

Advertisement

ವಲಯ 1ರ ಚರಂಡಿಯಲ್ಲಿ ಹರಿದ ತ್ಯಾಜ್ಯ ನೀರು ವಿವೇಕಾನಂದ ನಗರದ ಬಳಿಯ ವೆಟ್‌ವೆಲ್‌ನಲ್ಲಿ ಸಂಗ್ರಹಗೊಂಡು, ವಲಯ – 2ರ ಜಟ್ಟಿಪಳ್ಳದ ವೆಟ್‌ವೆಲ್‌ಗೆ ಪೂರೈಕೆಯಾಗುತ್ತದೆ. ಅಲ್ಲಿಂದ ಜಯನಗರ ಹೊಸಗದ್ದೆ ಬಳಿ ನಿರ್ಮಿಸಿದ ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ಪೂರೈಕೆಯಾಗಿ ಅಲ್ಲಿ ಮೂರು ಹಂತದಲ್ಲಿ ನೀರು ಶುದ್ಧೀಕರಣಗೊಂಡು, ಮರು ಬಳಕೆ ಮಾಡುವ ಉದ್ದೇಶ ಹೊಂದಲಾಗಿತ್ತು.

ಶುದ್ಧೀಕರಣ ಘಟಕಕ್ಕೆ ಆಕ್ಷೇಪ
ಕಾಮಗಾರಿ ಅನುಷ್ಠಾನದ ಸಂದರ್ಭ ಜಯನಗರ ಹೊಸಗದ್ದೆ ಬಳಿ ತ್ಯಾಜ್ಯ ಶುದ್ಧೀ ಕರಣ ಘಟಕ ಸ್ಥಾಪನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದಾಗ್ಯೂ ಅಲ್ಲಿ ನಿರ್ಮಾಣ ಮಾಡಲಾಗಿತ್ತು. ವೈಜ್ಞಾನಿಕ ಪದ್ಧತಿಯಲ್ಲಿ ಅನುಷ್ಠಾನ ಆಗದ ಕಾರಣ, ಒಳಚರಂಡಿ ವಲಯ 2ರಿಂದ ಬರುವ ತ್ಯಾಜ್ಯ ಶುದ್ಧೀಕರಣಗೊಳ್ಳುತ್ತಿಲ್ಲ. ನಿಯಮಾನುಸಾರ ಶುದ್ಧೀಕರಣದ ಒಂದು ಹೊಂಡದಿಂದ ಹಂತ-ಹಂತವಾಗಿ ಮೂರು ಹೊಂಡ ಭರ್ತಿ ಆಗಬೇಕಾದ ತ್ಯಾಜ್ಯ ನೀರು 2ನೇ ಹೊಂಡದಲ್ಲೇ ಇಂಗುತ್ತದೆ. ಇದರಿಂದ ಮಳೆಗಾಲದಲ್ಲಿ ಪರಿಸರವಿಡೀ ದುರ್ನಾತ ಬೀರುತ್ತಿದೆ.

ದುರಸ್ತಿಗೆ ಪತ್ರ ಬರೆದಿದ್ದೇವೆ
ಒಳಚರಂಡಿ ಕಾಮಗಾರಿಯ ಲೋಪ ಸರಿಪಡಿಸಲು ಕಾಮಗಾರಿ ನಿರ್ವಹಿಸಿರುವ ಒಳಚರಂಡಿ ಮಂಡಳಿಗೆ ಪತ್ರ ಮುಖೇನ ತಿಳಿಸಲಾಗಿದೆ. ಅವರು ನವೆಂಬರ್‌ ಆರಂಭದಲ್ಲಿ ದುರಸ್ತಿ ಮಾಡುವುದಾಗಿ ಹೇಳಿದ್ದರೂ ಮಳೆ ಇರುವ ಕಾರಣ ಸಾಧ್ಯವಾಗಿಲ್ಲ ಎಂದು ಕಾಲಾವಕಾಶ ತೆಗೆದುಕೊಂಡಿದ್ದಾರೆ. ದುರಸ್ತಿ ಅಸಾಧ್ಯವಾದರೆ ಅದರಿಂದ ಆದ ನಷ್ಟಕ್ಕೆ ಅವರೇ ಜವಾಬ್ದಾರರಾಗುತ್ತಾರೆ.
– ಮತ್ತಡಿ,
ಮುಖ್ಯಾಧಿಕಾರಿ, ಸುಳ್ಯನ.ಪಂ.

ನಗರ ಒಳಚರಂಡಿ ಯೋಜನೆ
ನಗರ ಪಂಚಾಯತ್‌ ನಗರದ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಉದ್ದೇಶದಿಂದ ಸರಕಾರದ ವಿವಿಧ ಅನುಧಾನ ಕ್ರೋಡೀಕರಿಸಿ, ಒಳಚರಂಡಿ ಯೋಜನೆ ಅನುಷ್ಠಾನಗೊಳಿಸುವ ಪ್ರಸ್ತಾವ ಇರಿಸಿತ್ತು. 2.87 ಕೋಟಿ ರೂ. ಕ್ರಿಯಾಯೋಜನೆಗೆ ಸರಕಾರದ ಹಂತದಲ್ಲಿ 2001 ಜುಲೈಯಲ್ಲಿ ಒಪ್ಪಿಗೆ ಸಿಕ್ಕಿ, 2001ರ ನವೆಂಬರ್‌ನಲ್ಲಿ ತಾಂತ್ರಿಕ ಮಂಜೂರಾತಿ ದೊರೆಯಿತು. 2003-04ರಲ್ಲಿ ಉದ್ದೇಶಿತ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಪೂರ್ತಿಯಾಗಿದೆ ಎಂದು ಗುತ್ತಿಗೆದಾರರು ಹಸ್ತಾಂತರಿಸಲು ಮುಂದಾದದ್ದು 2010ರಲ್ಲಿ. ಆದರೆ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂದು ಅಂದಿನ ಆಡಳಿತ ಸಮಿತಿ ಅದನ್ನು ಪಡೆದುಕೊಂಡಿರಲಿಲ್ಲ. ಅನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅದನ್ನು ಪಡೆದುಕೊಂಡರೂ ಬಹುನಿರೀಕ್ಷಿತ ಯೋಜನೆ ಚೇತರಿಕೆ ಕಾಣದೆ ಹಳ್ಳ ಹಿಡಿದದ್ದೆ ಸಾಧನೆ ಎನಿಸಿತ್ತು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next