ಬೆಳ್ತಂಗಡಿ: ಗ್ರಾಮಾಭಿವೃದ್ಧಿ ಯಿಂದ ನಿತ್ಯ ಆದಾಯ ನೀಡುವ ಹಾಲು ಮತ್ತು ಹಣ್ಣು, ಹೂ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದೇವೆ. ಹೈನುಗಾರರ ಶ್ರೇಯೋಭಿವೃದ್ಧಿಗೆ ಶ್ರೀಕ್ಷೇತ್ರ ಕಾರಣವಾಗಿರುವುದಕ್ಕೆ ಅತ್ಯಂತ ಹರ್ಷದಾಯಕ. ತನ್ನ ರಾಜ್ಯಸಭಾ ನಿಧಿಯಿಂದ ಬೀದರ್ ಜಿಲ್ಲೆಯ ಹಾಲು ಉತ್ಪಾದನಾ ಕ್ರಾಂತಿಗೆ 2.45 ಕೋ.ರೂ. ಅನುದಾನ ಇರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮುದಾಯ ಅಭಿವೃದ್ಧಿ ವಿಭಾಗದಡಿ ದ.ಕ. ಪಶು ವೈದ್ಯಕೀಯ ಸೇವಾ ಇಲಾಖೆಗೆ ಒದಗಿಸಿದ 45 ದ್ರವಸಾರಜನಕ ಜಾಡಿಗಳನ್ನು ಬುಧವಾರ
ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ವಿತರಿಸಿ ಅವರು ಮಾತನಾಡಿದರು.
ಹೇಮಾವತಿ ವೀ. ಹೆಗ್ಗಡೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ದ.ಕ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ (ಆಡಳಿತ) ಡಾ| ಅರುಣ್ ಕುಮಾರ್ ಮಾತನಾಡಿ, ಹೈನುಗಾರಿಕೆಯಡಿ ಜಿಲ್ಲೆಯಲ್ಲಿ 398 ಹಾ.ಉ. ಸಹಕಾರಿ ಸಂಘಗಳಿವೆ. ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಗುಜರಾತ್ ಬಿಟ್ಟರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ಬೆಳ್ತಂಗಡಿ ತಾಲೂಕು 1.15 ಲಕ್ಷ ಲೀ. ಹಾಲು ಉತ್ಪಾದಿಸಿ ಒಕ್ಕೂಟಕ್ಕೆ ಒದಗಿಸುತ್ತಿದೆ. ಆದರೂ ಜಿಲ್ಲೆಗೆ ಲಕ್ಷ ಲೀ. ಹಾಲು ಕೊರತೆಯಿದೆ ಎಂದರು.
ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಪ್ರಸ್ತಾವನೆಗೈದು, ಹೈನುಗಾರಿಕೆ ಅಭಿವೃದ್ಧಿಯಾದಂತೆ ಪಶುವೈದ್ಯರ ಕೊರತೆ ನೀಗಿಸುವ ಅಗತ್ಯವಿದೆ. ಯೋಜನೆ ಮೂಲಕ ಹಸು ಖರೀದಿಗೆ 600 ಕೋ.ರೂ. ಸಾಲ ಒದಗಿಸಲಾಗಿದೆೆ. ರಾಜ್ಯದಲ್ಲಿ ಈವರೆಗೆ 451 ಹಾಲು ಉ.ಸ. ಸಂಘಗಳ ಕಟ್ಟಡ ಹಾಗೂ ಸಲಕರಣೆಗಳಿಗಾಗಿ 30.53 ಕೋಟಿ ರೂ. ನೀಡಿದ್ದು, ಬೆಳ್ತಂಗಡಿ ತಾಲೂಕಿನ 17 ಹಾಲು ಸಂಘಗಳಿಗೆ ಈವರೆಗೆ 53.00 ಲಕ್ಷ ರೂ. ನೀಡಲಾಗಿದೆ ಎಂದರು.
ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್ ಕುಮಾರ್, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಜನಾರ್ದನ ಕೆ.ಎನ್. ಉಪಸ್ಥಿತರಿದ್ದರು.
ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿ, ಸಮುದಾಯ ಅಭಿವೃದ್ಧಿ ವಿಭಾಗ ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್ ವಂದಿಸಿದರು. ಶುದ್ಧಗಂಗಾ ವಿಭಾಗ ನಿರ್ದೇಶಕ ಶಿವಾನಂದ ಆಚಾರ್ಯ ನಿರ್ವಹಿಸಿದರು.
ಬೀದರ್‌ನಲ್ಲಿ 3 ಲಕ್ಷ ಲೀ. ಹಾಲು ಉತ್ಪಾದನೆ ಗುರಿ
ದೇಸಿ ತಳಿ ಹಾಗೂ ಮಿಶ್ರ ತಳಿಯ ಅಭಿವೃದ್ಧಿಯಿಂದ ಹೈನುಗಾರಿಕೆಗೆ ಶಕ್ತಿ ತುಂಬಲಿದೆ. ಈ ನೆಲೆಯಲ್ಲಿ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿ ಭಾಲ್ಕಿ-2 ಔರದ್-1, ಹುಮನಾಬಾದ್-4 ಸೇರಿ ಒಟ್ಟು 7 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಗಳಿಗೆ ತಲಾ 10 ಲಕ್ಷದಂತೆ 70 ಲಕ್ಷ ರೂ., 42 ಹಾಲು ಉ.ಸ. ಸಂಘಗಳಿಗೆ ಸ್ವಯಂ ಚಾಲಿತ ಯಂತ್ರ ಖರೀದಿಗೆ 80.85 ಲಕ್ಷ ರೂ. ಸೇರಿದಂತೆ ಇತರ ಸಲಕರಣೆಗೆ ಒಟ್ಟು 2.45 ಕೋ.ರೂ. ಒದಗಿಸಿದ್ದೇವೆ. ಈ ಮೂಲಕ ಬೀದರ್‌ನಲ್ಲಿ ಮೂರುವರೆ ವರ್ಷದಲ್ಲಿ 3 ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದರು.