ಉತ್ತರ ಪ್ರದೇಶ : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ 2.5 ಅಡಿ ಎತ್ತರದ ಅಜೀಮ್ ಮನ್ಸೂರಿ ತನಗೆ ಮದುವೆಯಾಗಲು ಹೆಣ್ಣು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದರು. ತಾವು ತುಂಬಾ ಕುಳ್ಳ ಇರುವ ಕಾರಣ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದು ಅಜೀಮ್ ಪೊಲೀಸರಲ್ಲಿ ಮೊರೆ ಹೋಗಿದ್ದರು. ಕಳೆದ ಐದು ವರ್ಷಗಳಿಂದ ವಧುವಿನ ಹುಡುಕಾಟದಲ್ಲಿದ್ದ ಮನ್ಸೂರಿಗೆ ಕೊನೆಗೂ ಹೆಣ್ಣು ಸಿಕ್ಕಿದ್ದಾಳೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾಣ ನಿವಾಸಿಯಾಗಿರುವ ಅಜೀಮ್ ಮನ್ಸೂರಿ 5ನೇ ತರಗತಿ ಓದಿದ್ದು, ಸದ್ಯ ಕಾಸ್ಮೆಟಿಕ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರನ್ನು ಹಪುರ್ ಮೂಲದವರಾದ ಬುಶ್ರಾ ಎಂಬುವವರು ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಇವರೂ ಕೂಡ ಅಜೀಮ್ ಅವರಷ್ಟೇ ಎತ್ತರವಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಜೀಮ್ ಬಗ್ಗೆ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ನಂತರ ಈ ಸಂಬಂಧ ಸಿಕ್ಕಿರುವುದಾಗಿ ಅಜೀಮ್ ಮೂಲಗಳು ತಿಳಿಸಿವೆ. ಅಲ್ಲದೆ ಇತ್ತೀಚೆಗೆ ಅಜೀಮ್ ಹಪೂರ್ ಗೆ ಭೇಟಿ ನೀಡಿ ಬುಶ್ರಾ ಕುಟುಂಬಂದ ಜೊತೆ ಮಾತುಕತೆಯನ್ನೂ ನಡೆಸಿರುವುದಾಗಿ ತಿಳಿದುಬಂದಿದೆ.
ಬುಶ್ರಾ ಮನೆಗೆ ಭೇಟಿ ಕೊಟ್ಟ ಅಜೀಮ್ , ಭಾವಿ ಪತ್ನಿಗೆ ಬಂಗಾರದ ಉಂಗುರ ಮತ್ತು 2100 ನಗದನ್ನು ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಹುಡುಗಿ ಮನೆ ಕಡೆಯವರೂ ಕೂಡ ಬಂಗಾರದ ಒಂದು ಉಂಗುರ ಮತ್ತು 3100 ನಗದನ್ನು ನೀಡಿದ್ದಾರೆ.
ಇನ್ನು ಹುಡುಗಿ ಮನೆಯಲ್ಲಿಯೇ ಮದುವೆ ನಿಶ್ಚಯವಾಗಿದ್ದು, ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರಂತೆ.