ಜೇವರ್ಗಿ: ತಾಲೂಕಿನ ಆಂದೋಲಾದಿಂದ ಶಹಾಪುರ ತಾಲೂಕಿನ ಅಣಬಿ ಗ್ರಾಮದ ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ 2.5 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಡಾ| ಅಜಯಸಿಂಗ್ ಹೇಳಿದರು.
ತಾಲೂಕಿನ ಆಂದೋಲಾ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆಂದೋಲಾ ಗ್ರಾಮದಿಂದ ಶಹಾಪುರ ತಾಲೂಕಿನ ಅಣಬಿ ಗ್ರಾಮದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಕ್ಷೇತ್ರದ 164 ಹಳ್ಳಿಗಳ ರಸ್ತೆ ಸುಧಾರಣೆಗೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಸುಧಾರಣೆಯಿಂದ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಈಗಾಗಲೇ ಆಂದೋಲಾ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಿಸಲಾಗಿದೆ. ಅಲ್ಲದೇ ಹೋಬಳಿ ಕೇಂದ್ರಗಳಾದ ಮಂದೇವಾಲ, ಇಜೇರಿ, ಯಡ್ರಾಮಿಯಲ್ಲಿ 50ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಭಾಗದ ಜನರು, ರೈತರು ಬಹುದಿನದಿಂದ ಈ ರಸ್ತೆ ಸುಧಾರಣೆಗೆ ಹಲವು ಬಾರಿ ತಮ್ಮಲ್ಲಿ ಮನವಿ ಮಾಡಿದ್ದರು. ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಈ ರಸ್ತೆ ಮಂಜೂರಿ ಮಾಡಿಸಲಾಗಿದೆ ಎಂದರು.
ಆಂದೋಲಾದಿಂದ ಗುಡೂರ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಆಂದೋಲಾದಿಂದ ಗಂವ್ಹಾರ ವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಬರುವ ದಿನಗಳಲ್ಲಿ ಆಂದೋಲಾ ಗ್ರಾಮದಲ್ಲಿನ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಗೌಡಪ್ಪಗೌಡ ಪೊಲೀಸ್ ಪಾಟೀಲ, ಸಂಗನಗೌಡ ಮಾಲಿಪಾಟೀಲ, ಕಾಶಿಂ ಪಟೇಲ ಮುದಬಾಳ, ಕಾಶಿರಾಯಗೌಡ ಯಲಗೋಡ, ಮಲ್ಲಿಕಾರ್ಜುನ ಲಕ್ಕಣ್ಣಿ, ಯಶವಂತ ಹೋತಿನಮಡು, ಗೋವಿಂದ ತುಳೇರ, ಗಿರೀಶ ಹವಲ್ದಾರ್, ನಬೀ ಕುಕನೂರ, ಮೈಲಾರಿ ಮಹೇಂದ್ರಕರ್, ಬಸವರಾಜ ದೇವದುರ್ಗ, ಮಕೂºಲ್ ಜಮಾದಾರ, ಸಿರಾಜುದ್ಧೀನ್ ತಿರಂದಾಜ, ದಂಡಪ್ಪ ದಂಡಗುಂಡ ಮತ್ತಿತರರು ಇದ್ದರು.