Advertisement

ರಾಜ್ಯದಲ್ಲಿ 2.31 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ

02:49 PM Apr 03, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬರೊಬ್ಬರಿ 2,31,932 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸದ್ಯ ಕೋವಿಡ್‌ ಪ್ರಮಾಣ ತಗ್ಗಿದರೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿರುವುದು ಪಾಲಕರಲ್ಲಿ ಭೀತಿ ಹುಟ್ಟಿಸಿದೆ.

Advertisement

ಪರಿಣಾಮ ಮಕ್ಕಳಲ್ಲಿ ವಿವಿಧ ರೋಗಗಳು ಉಲ್ಬಣಗೊಳ್ಳುತ್ತಿವೆ. ರಾಜ್ಯದಲ್ಲಿ 8,711 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದರೆ, 2,23,221 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗಗಳು, ಕಲಬುರಗಿ, ವಿಜಯನಗರ, ಬೆಳಗಾವಿ ಜಿಲ್ಲೆ ಅಪೌಷ್ಟಿಕತೆಯಲ್ಲಿ ಮೊದಲ 4 ಸ್ಥಾನದಲ್ಲಿವೆ ಎಂಬ ಅಂಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ “ಉದಯವಾಣಿ’ಗೆ ದೃಢಪಡಿಸಿದೆ.

ಮಕ್ಕಳ ಅಪೌಷ್ಟಿಕತೆಗೆ ಪ್ರಮುಖ ಕಾರಣ: ರಾಜ್ಯದ ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಸಂಬಂಧಿ ಜಾಗೃತಿ ಕೊರತೆ, ಪೌಷ್ಠಿಕ ಆಹಾರ ಸೇವನೆ ಕಡೆಗೆ ಗಮನ ನೀಡದಿರುವುದು, ಹೆರಿಗೆ ವೇಳೆ ತಾಯಿ-ಮಗುವಿನ ಸೂಕ್ತ ಆರೈಕೆ ಮಾಡದಿರು ವುದು, ಬಡತನ, ಅನಕ್ಷರತೆ ಹಾಗೂ ಅಂಗನವಾಡಿ ಯಲ್ಲಿ ಪೌಷ್ಠಿಕ ಆಹಾರ ಪದಾರ್ಥದ ಕೊರತೆ ಎದುರಾಗಿರುವುದೇ ಮಕ್ಕಳ ಅಪೌಷ್ಟಿಕತೆಗೆ ಪ್ರಮುಖ ಕಾರಣ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಪತ್ತೆಯಾಗಿದೆ.

ಅಪೌಷ್ಟಿಕತೆ ನಿರ್ಮೂಲನೆಯೇ ಸವಾಲು: ಸರ್ಕಾರದ ಹತ್ತಾರು ಯೋಜನೆಗಳಿದ್ದರೂ ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆ ಸವಾಲಾಗಿ ಪರಿಣಮಿ ಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರವು ಹಲವು ಹೊಸ ಕ್ರಮ ಕೈಗೊಂಡಿದೆ. ಅಂಗನವಾಡಿಗೆ ದಾಖಲಾದ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ 300 ದಿನ ಪೌಷ್ಠಿಕ ಆಹಾರ ಪೂರೈಕೆ, 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಾರದಲ್ಲಿ 2 ದಿನ ಮೊಟ್ಟೆ , 150 ಮಿ.ಲೀ ಹಾಲು ವಿತರಣೆ, ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪ್ರತಿ ನಿತ್ಯ 12 ರೂ. ಹಾಗೂ ಸಾಧಾರಣ ಅಪೌಷ್ಟಿಕತೆ ಮಕ್ಕಳಿಗೆ 8 ರೂ. ಮೌಲ್ಯದ ಪೌಷ್ಠಿಕ ಆಹಾರ ವಿತರಣೆ. ಇನ್ನು 6 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ನಿಗದಿತ ಚುಚ್ಚು ಮದ್ದು, ಆರೋಗ್ಯ ಹಾಗೂ ಪೌಷ್ಠಿಕ ಶಿಬಿರ ನಡೆಸಿ ಪಾಲಕರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.

ತೀವ್ರ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಪೌಷ್ಠಿಕ ಪುನರ್ವಸತಿ ಕೇಂದ್ರದಲ್ಲಿ (ಎನ್‌ಆರ್‌ಸಿ) ಚಿಕಿತ್ಸೆಗೆ ಅವಕಾಶವಿದ್ದರೂ ಪಾಲಕರು ಇತ್ತ ಮುಖ ಮಾಡದಿರುವುದು ಇಲಾಖೆಗೆ ದೊಡ್ಡ ತಲೆನೋವಾಗಿದೆ.

Advertisement

ಅಪೌಷ್ಟಿಕತೆಯಿಂದ ಸಮಸ್ಯೆಗಳೇನು ?: ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿದ್ದಾಗ ಹಲವು ರೋಗಗಳಿಗೆ ಈಡಾಗುವ ಅಪಾಯವೂ ಹೆಚ್ಚಿರುತ್ತದೆ. ತೀವ್ರ ಅಪೌಷ್ಟಿಕತೆಯಿಂದ 5 ರ್ವದೊಳಗಿನ ಮಕ್ಕಳು ಮರಣ ಹೊಂದುವ ಸಾಧ್ಯತೆಗಳಿವೆ. ರಕ್ತಹೀನತೆ, ದಣಿವು, ಆಯಾಸ, ಅನಾಸಕ್ತಿ, ಪದೇ-ಪದೇ ಆರೋಗ್ಯ ಸಮಸ್ಯೆ ಕಡಿಮೆ ತೂಕವಿರುವ ಮಕ್ಕಳಲ್ಲಿ 47 ಪ್ರತಿಶತ ಮಕ್ಕಳ ಮಾನಸಿಕ ಹಾಗೂ ಶಾರೀರಿಕ ವಿಕಾಸ ಮಂದಗತಿಯಾಗಲಿದೆ. ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳ ಕೊರತೆ ಮಗುವಿಗೂ ಮಾರಕವಾಗಲಿದೆ.

ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಯೋಜನೆಗಳ ಸಮಪರ್ಕಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇಂತಹ ಮಕ್ಕಳ ಬಗ್ಗೆ ನಿಗಾ ವಹಿಸಿ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ●ಡಾ.ಕೆ.ಎನ್‌.ಅನುರಾಧ, ನಿರ್ದೇಶಕಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಮಕ್ಕಳ ಅಪೌಷ್ಟಿಕತೆಗೆ ಪರಿಹಾರವೇನು?

 ಹಸಿರು ಸೊಪ್ಪು, ತರಕಾರಿ, ಮೀನು, ದವಸ ಧಾನ್ಯ, ಮೊಟ್ಟೆ ಸೇವನೆ ಉತ್ತಮ.

 ಭ್ರೂಣವು ಹೊಟ್ಟೆಯಲ್ಲಿ ಬೆಳವಣಿಗೆ ಹಂತದಲ್ಲಿರುವಾಗಲೇ ಪೌಷ್ಠಿಕ ಆಹಾರ ಸೇವಿಸಿ.

 ಮಕ್ಕಳನ್ನು ಕಾಲಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆ ಗೊಳಪಡಿಸಿ ಸಲಹೆ ಪಡೆಯಿರಿ.

 ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ.

 ವಿಟಮಿನ್‌, ಖನಿಜಾಂಶ, ಪೋಷಕಾಂಶಭರಿತ ಆಹಾರದತ್ತ ಗಮನಹರಿಸಿ.

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next