ಜೈಪುರ: ರಾಜಸ್ಥಾನದ ಸರ್ಕಾರಿ ಕಛೇರಿ ಯೋಜನಾ ಭವನದಲ್ಲಿ ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ 2.31 ಕೋಟಿ ನಗದು ಮತ್ತು 1 ಕೆ.ಜಿ ತೂಕದ ಚಿನ್ನದ ಬಿಸ್ಕತ್ತು ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7-8 ಮಂದಿ ಇಲಾಖಾ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಜೈಪುರ ನಗರ ಪೊಲೀಸ್ ಅಧಿಕಾರಿ ಮಹೇಶ್ ಗುಪ್ತಾ ಅವರ ನೇತೃತ್ವದ ತಂಡ ಸರ್ಕಾರಿ ಕಟ್ಟಡದ ಮೇಲೆ ದಾಳಿ ನಡೆಸಿ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ದೊಡ್ಡವರ ಕೈವಾಡ ಇದೆಯೆಂಬ ಗುಮಾನಿ ವ್ಯಕ್ತವಾಗಿದ್ದು ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೈಪುರ ಪೊಲೀಸ್ ಕಮಿಷನರ್ ಆನಂದ್ ಕುಮಾರ್ ಶ್ರೀವಾಸ್ತವ, ʻಜೈಪುರದ ಸರ್ಕಾರಿ ಯೋಜನಾ ಭವನದ ಕಪಾಟಿನಲ್ಲಿದ್ದ ಚೀಲದಲ್ಲಿ ಸುಮಾರು 2.31 ಕೋಟಿ ರೂ. ನಗದು ಮತ್ತು 1 ಕೆ.ಜಿ ಗೂ ಹೆಚ್ಚಿನ ತೂಕದ ಚಿನ್ನದ ಬಿಸ್ಕತ್ತನ್ನು ವಶಪಡಿಸಿಕೊಳ್ಳಲಾಗಿದೆ. ಸೆಕ್ಷನ್ 102 ಅಡಿಯಲ್ಲಿ ಪೊಲೀಸರು ಈ ಹಣವನ್ನು ಜಪ್ತಿ ಮಾಡಿದ್ದು, ಈ ಬಗ್ಗೆ ತನಿಖೆ ಕೈಗೊಂಡಿದೆʼ ಎಂದು ಹೇಳಿದ್ದಾರೆ.
ʻಈ ಕುರಿತು ಸಿಸಿ ಟಿವಿಯಲ್ಲಿನ ದೃಶ್ಯಾವಳಿಗಳನ್ನು ಕಲೆಹಾಕಲಾಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆʼ ಎಂದು ಆನಂದ್ ಕುಮಾರ್ ಶ್ರೀವಾಸ್ತವ್ ಅವರು ಹೇಳಿದ್ದಾರೆ.
ಇದನ್ನೂ ಓದಿ:
ಅಪಹರಣದ ನಾಟಕವಾಡಿ ಪೋಷಕರ ಬಳಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟ ಮಗಳು… ಬಳಿಕ ಆದದ್ದೇ ಬೇರೆ