ಬೆಂಗಳೂರು: ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿವಿಧ ಮಾದರಿಯಲ್ಲಿ ಸಂಗ್ರಹವಾಗಿದ್ದ 2.27 ಕೋಟಿ ರೂ. ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಚೀಫ್ ಜುಡಿಷಿ ಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಅಡ್ಮಿನಿಷ್ಟ್ರೇಷನ್ ಶಿರಸ್ತೇ ದಾರ್ ಬಿ.ಆರ್.ಸುಮಂಗಲಾದೇವಿ ಅವರು ನೀಡಿದ ದೂರಿನ ಮೇರೆಗೆ ಕೋರ್ಟ್‌ನ ಅಕೌಂಟ್ ಶಿರಸ್ತೇದಾರ್ ನಾರಾಯಣ (58), ದ್ವಿತೀಯ ದರ್ಜೆ ಸಹಾಯಕ ಮಕ್ಸೂದ್ ಪಾಷಾ(43), ಗುಮಾಸ್ತ ಅವಿನಾಶ್ ಇಂಗಳಗಿ (25), ನಿಶಾಂತ್ ರಾಘವ ನಾಯ್ಕ (29), ಹೇಮಾ(24), ಪ್ರೋಸಸ್ ಸರ್ವರ್ ಶಕುಂತಲಾ (46), ಸಂಜೀವ್ ಕುಮಾರ್(37) ಎಂಬುವರ ವಿರುದ್ಧ ಹಲ ಸೂರು ಗೇಟ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ಪೈಕಿ ಮಕ್ಸೂದ್ ಪಾಷಾನನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಕೋರ್ಟ್‌ನ ಲೆಕ್ಕ-ಪತ್ರಗಳನ್ನು ಇಂಡಿಯನ್ ಆಡಿಟ್ ಮತ್ತು ಅಕೌಂಟ್ ಡಿಪಾರ್ಟ್‌ಮೆಂಟ್ ಅಧಿಕಾರಿಗಳು 2019-20, 2020-21 ಮತ್ತು 2021-22ನೇ ವರ್ಷಗಳ ಅವಧಿಯ ಲೆಕ್ಕ ಪತ್ರಗಳ ಆಡಿಟ್ ಮಾಡಿದ್ದರು. ಈ ವೇಳೆ ಕೋರ್ಟ್‌ನ ದಂಡ ಹಣ, ಕ್ಯಾಶ್ ಸೆಕ್ಯೂರಿಟಿ ಹಣ, ಕೋರ್ಟ್ ಶುಲ್ಕ, ಪ್ರಕ್ರಿಯೆ ಶುಲ್ಕ, ಕಾಪಿ ಚಾರ್ಜ್ ಸೇರಿ ಹಣಕಾಸಿನ ವ್ಯವಹಾರಗಳನ್ನು ಪರಿಶೀಲಿಸಲಾಗಿದೆ.
ಈ ವೇಳೆ 2.27 ಕೋಟಿ ರೂ. ವ್ಯತ್ಯಾಸ ಕಂಡು ಬಂದಿದೆ ಎಂದು ದೂರಿನಲ್ಲಿ ಸುಮಂಗಲಾದೇವಿ ಆರೋಪಿಸಿದ್ದಾರೆ. ಹಣದ ದುರ್ಬಳಕೆ ಬಗ್ಗೆ ಪರಿಶೀಲಿಸಿದಾಗ ದಂಡ ಸೇರಿ ವಿವಿಧ ಶುಲ್ಕಗಳ ಮೂಲಕ ಸಂಗ್ರಹವಾದ ಹಣವನ್ನು ಕೋರ್ಟ್‌ಗೆ ಪಾವತಿಸದೆ, ಕೆಟಿಸಿ-25 ಚಲನ್ ಅನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ನಕಲಿ ಬ್ಯಾಂಕ್ ಸೀಲ್ ಮಾಡಿಕೊಂಡು, ಬ್ಯಾಂಕ್ ಅಧಿಕಾರಿಗಳ ಸಹಿಯನ್ನು ನಕಲಿ ಮಾಡಿ, ಬ್ಯಾಂಕ್‌ಗೆ ಕಟ್ಟಿರುವಂತೆ ರಶೀದಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ವಂಚಿಸಿರುವ ಏಳು ಮಂದಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಮಂಗಲಾದೇವಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು