Advertisement

ಸಿಎಎ ಪ್ರತಿಭಟನೆಯಿಂದ ಕೆಎಸ್‌ಆರ್‌ಟಿಸಿಗೆ 2.15 ಕೋಟಿ ನಷ್ಟ?

10:25 AM Dec 22, 2019 | Sriram |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕೆಎಸ್‌ಆರ್‌ಟಿಸಿಗೆ 2.15ಕೋ. ರೂ. ನಷ್ಟ ಎದುರಾಗಿದೆ ಎಂದು ಅಂದಾಜಿಸಲಾಗಿದೆ.

Advertisement

ಮಂಗಳೂರಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಮೂರು ದಿನಗಳಿಂದ ಬಸ್‌ಗಳ ಸಂಚಾರ ವ್ಯತ್ಯಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪೊಲೀಸರ ಭದ್ರತೆಯೊಂದಿಗೆ ಗುಂಪು ಗುಂಪಾಗಿ ನಿಗಮ ರಸ್ತೆಗಿಳಿಸುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಸಂಚಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ಪ್ರತಿಭಟನೆಯ ಆರಂಭದ ದಿನವಾದ ಡಿ.19ರಂದು ಪ್ರತಿಭಟನೆಯ ಸ್ವರೂಪವನ್ನು ತಿಳಿಯದೆ ಅಲ್ಪ ಪ್ರಮಾಣದಲ್ಲಿ ಬಸ್‌ಗಳು ಸಂಚರಿಸಿವೆ. ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತಿದ್ದಂತೆ ಬಸ್‌ಗಳನ್ನು ಡಿಪೋಗಳಿಂದ ಹೊರಗೆ ಬಿಡದಂತೆ ನಿಗಮ ಎಚ್ಚರ ವಹಿಸಿದೆ. ಡಿ.20ರಂದು ಮಂಗಳೂರು ಮತ್ತು ಪುತ್ತೂರಿನ ಎಲ್ಲ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಿದ ಕೆಎಸ್‌ಆರ್‌ಟಿಸಿ, ಡಿ.21ರಂದು ಮಂಗಳೂರಿನ ಮೂರು ಡಿಪೋಗಳ 550 ಬಸ್‌ಗಳ ಪೈಕಿ ಕೇವಲ 48 ಬಸ್‌ಗಳು ರಸ್ತೆಗಿಳಿದಿವೆ. ಇನ್ನುಳಿದಂತೆ 553 ಬಸ್‌ಗಳನ್ನು ಹೊಂದಿರುವ ಪುತ್ತೂರು ಡಿಪೋದಲ್ಲಿ ಮಂಗಳೂರು ಕಡೆ ಪ್ರಯಾಣಿಸುವ ಬಸ್‌ಗಳನ್ನು ಹೊರತುಪಡಿಸಿ ಶೇ.90 ಬಸ್‌ಗಳು ಸಂಚರಿಸಿವೆ.

ಮಂಗಳೂರು ಕಡೆ ಹೊರಡುವ ಬಸ್‌ಗಳು ಬಿ.ಸಿ.ರೋಡ್‌ ತನಕ ಮಾತ್ರ ಸಂಚರಿಸುತ್ತಿವೆ.
ಮಂಗಳೂರು ಸಹಿತ ರಾಜ್ಯಾದ್ಯಂತ ನಡೆದಿರುವ ಪ್ರತಿಭಟನೆಯ ಹಾನಿ ಸಂಬಂಧ ಯಾವುದೇ ಲೆಕ್ಕ ಅಂದಾಜಿಸಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದೇ ನಮಗೆ ದೊಡ್ಡ ಸವಾಲಾಗಿತ್ತು, ಒಂದೆರಡು ದಿನಗಳಲ್ಲಿ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂರು ದಿನಕ್ಕೆ 8 ಬಸ್‌ ಗಾಜು ಪುಡಿ
ಡಿ.19ರಿಂದ ಈವರೆಗೆ ಒಟ್ಟು ಎಂಟು ಬಸ್‌ಗಳ ಗಾಜಿಗೆ ಕಲ್ಲು ತೂರಾಟ ಮಾಡಲಾಗಿದೆ. ಮಂಗಳೂರು ಡಿಪೋ 1, 2 ಮತ್ತು 3ರಲ್ಲಿ ಸೇರಿ ಮೂರು ಬಸ್‌ಗಳು ಮತ್ತು ಪುತ್ತೂರು ಡಿಪೋದ ಉಪ್ಪಿನಂಗಡಿ ಸುತ್ತಮುತ್ತ ಐದು ಬಸ್‌ಗಳಿಗೆ ಕಲ್ಲು ತೂರಲಾಗಿದ್ದು, ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಬಸ್‌ ಹೊರತುಪಡಿಸಿ ಬೇರೆಲ್ಲಾ ಬಸ್‌ಗಳಿಗೆ ಕಿಟಕಿ ಗಾಜು ಮಾತ್ರ ಹಾನಿಯಾಗಿದೆ. ಈ ಎಲ್ಲಾ ಬಸ್‌ಗಳ ಜಖಂ ವೆಚ್ಚ ಒಂದು ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಡಿಪೋ ಮುಖ್ಯಸ್ಥ ನಾಗೇಂದ್ರ ಮಾಹಿತಿ ನೀಡಿದರು.

Advertisement

ಸಂಚಾರ ಸ್ಥಗಿತವಾಗಿರುವ ಪ್ರದೇಶಗಳು
ಸ್ಥಳೀಯವಾಗಿ ಮಂಗಳೂರಿನಿಂದ ಬಂಟ್ವಾಳ, ಮಣಿಪಾಲ, ಕಾಸಗೋಡು, ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಮತ್ತು ನಗರ ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇನ್ನೂ ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಂಗಳೂರು ಮಾರ್ಗದ ಬಸ್‌ ಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ ಮಂಗಳೂರು ಮಾರ್ಗವಾಗಿ ಸಂಚರಿಸುವ ಬಸ್‌ಗಳಿಂದ 60ಲಕ್ಷ ಆದಾಯ ಸಂಗ್ರಹವಾಗುತಿತ್ತು, ಕ್ರಿಸ್‌ಮಸ್‌ ಹಬ್ಬದ ರಜೆ ಕಾರಣ ನಿತ್ಯ 70 ರಿಂದ 75ಲಕ್ಷ ಆದಾಯ ಸಂಗ್ರಹವಾಗಬೇಕಿತ್ತು. ಆದರೆ, ಕಳೆದ ಮೂರು ದಿನಗಳ ನಿಷೇದಾಜ್ಞೆಯಿಂದಾಗಿ ಮೂರು ದಿನಗಳಿಂದ ಕೇವಲ 1.30ಕೋಟಿ ಸಂಗ್ರಹವಾಗಿ ಸುಮಾರು ಒಂದು ಕೋಟಿ ರೂ. ನಷ್ಟು ನಷ್ಟವಾಗಿದೆ. ಪುತ್ತೂರು ಡಿಪೋದಲ್ಲಿ ನಿತ್ಯ 25ರಿಂದ 30ಲಕ್ಷ ಆದಾಯ ಸಂಗ್ರಹವಾಗುತಿದ್ದು, ಮೂರು ದಿನಗಳಿಂದ 70ರಿಂದ 80ಲಕ್ಷ ನಷ್ಟ ಆಗಿದೆ ಎಂದು ಮಂಗಳೂರು ಡಿಪೋ ಮುಖ್ಯಸ್ಥ ಎಸ್‌.ಎನ್‌.ಅರುಣ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next