Advertisement

ಚಿಕ್ಕಬಳ್ಳಾಪುರ ನಗರಸಭೆಗೆ 2.15 ಕೋಟಿ ಅನುದಾನ

10:05 AM Jun 01, 2019 | Team Udayavani |

ಚಿಕ್ಕಬಳ್ಳಾಪುರ: ಒಂದೆಡೆ ಸಚಿವ ಸ್ಥಾನ ಸಿಗದಿದ್ದಕ್ಕೆ, ಮತ್ತೂಂದೆಡೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬಹಿರಂಗವಾಗಿಯೇ ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಗೊಂಡಿರುವ ಶಾಸಕ ಡಾ.ಕೆ.ಸುಧಾಕರ್‌ರನ್ನು ಸಮಾಧಾನಪಡಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದು, ಚಿಕ್ಕಬಳ್ಳಾಪುರ ನಗರಸಭೆಗೆ ಘೋಷಿಸಿರುವ 50 ಕೋಟಿ ರೂ. ವಿಶೇಷ ಅನುದಾನಕ್ಕೆ ಮೊದಲ ಕಂತಾಗಿ 2.15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ.

Advertisement

ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹೊಸದಾಗಿ ಜಿಲ್ಲೆಯಾಗಿದ್ದ ಚಿಕ್ಕಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಪಟ್ಟಣ ಹಾಗೂ ನಗರ ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 2016-17ನೇ ಸಾಲಿನ ಬಜೆಟ್‌ನಲ್ಲಿ ಹಾವೇರಿ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ನಗರಸಭೆಗೆ ತಲಾ 50 ಕೋಟಿ ರೂ. ವಿಶೇಷ ಅನುದಾನ ಘೋಷಿಸಿದ್ದರು.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ವರ್ಷ ಕಳೆದರೂ ಸರ್ಕಾರದಿಂದ ಗುತ್ತಿಗೆದಾರರಿಗೆ ನಯಾಪೈಸೆ ಬಿಡುಗಡೆಯಾಗದ ಕಾರಣ ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡ ಬಗ್ಗೆ ಶಾಸಕ ಡಾ.ಕೆ.ಸುಧಾಕರ್‌ ಆಗಾಗ ಬಹಿರಂಗವಾಗಿಯೇ ಸಿಎಂ ಹೆಚ್.ಡಿಕುಮಾರಸ್ವಾಮಿ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಸಚಿವ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್‌ನ ಅತೃಪ್ತ ಶಾಸಕರ ಬಣದಲ್ಲಿ ಈಗಲೂ ಗುರುತಿಸಿಕೊಂಡು ಆಪರೇಷನ್‌ ಕಮಲದ ಹೊಸ್ತಿಲಲ್ಲಿ ಇದ್ದು, ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿದ್ದಾರೆ. ಇದೀಗ ಸಿಎಂ ಕುಮಾರಸ್ವಾಮಿ ಶಾಸಕ ಸುಧಾಕರ್‌ರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿರುವ ಮುಖ್ಯಮಂತ್ರಿಗಳ ಸಣ್ಣ ಹಾಗೂ ಮದ್ಯಮ ಪಟ್ಟಣಗಳ ಸಮಗ್ರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈ ಹಿಂದೆ ಸಿದ್ದರಾಮಯ್ಯ ಘೋಷಿಸಿದ್ದ 50 ಕೋಟಿ ರೂ. ವಿಶೇಷ ಅನುದಾನಕ್ಕೆ ಈಗ ಸಿಎಂ ಮೊದಲ ಹಂತದಲ್ಲಿ 2.15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ.

Advertisement

100 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ: ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ. ನಗರಸಭೆ ನಗರೋತ್ಥಾನ ಮೂರನೇ ಹಾಗೂ ನಾಲ್ಕನೇ ಹಂತದ ಸುಮಾರು 30 ಕೋಟಿ ಹಾಗೂ ಎಸ್‌ಎಫ್ಸಿ 20 ಕೋಟಿ ಸೇರಿ ಜಿಲ್ಲಾ ಕೇಂದ್ರದ ಒಟ್ಟು 31 ವಾರ್ಡ್‌ಗಳಲ್ಲಿ ಕೂಡ ಚರಂಡಿ, ರಸ್ತೆ, ಉದ್ಯಾನವನ, ಪಾದಚಾರಿ ಮಾರ್ಗ, ವಿದ್ಯುತ್‌ ದೀಪಗಳು ಸೇರಿದಂತೆ ನಗರದ ಸಮಗ್ರ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೊಂಡಿದ್ದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ನಾಲ್ಕೈದು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಈ ಬಗ್ಗೆ ಅನೇಕ ಬಾರಿ ಬಹಿರಂಗವಾಗಿ ಸಭೆ, ಸಮಾರಂಭಗಳಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅನುದಾನ ಬಿಡುಗಡೆಗೆ ಆಗ್ರಹಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಯಾವ ಇಲಾಖೆಯಿಂದಲೂ ಅನುದಾನ ಬಿಡುಗಡೆಗೊಳ್ಳುತ್ತಿಲ್ಲ ಎಂದು ವಾಗ್ಧಾಳಿ ನಡೆಸುವ ಮೂಲಕ ಶಾಸಕರು ಗಮನ ಸೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next