ಕುಂದಾಪುರ: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೊಸೈಟಿ ಒಂದರಲ್ಲಿ ಗ್ರಾಹಕರು ಇಟ್ಟಿದ್ದ ನಿರಖು ಠೇವಣಿ ದುರುಪಯೋಗಕ್ಕೊಳಗಾಗಿ 2.11 ಕೋ.ರೂ. ವಂಚನೆಯಾಗಿದೆ.
ವರ್ಷಗಳ ಹಿಂದೆ ನಗರದಲ್ಲಿ ಆರಂಭವಾದ ಸೊಸೈಟಿಯೊಂದು ಗ್ರಾಹಕರಿಂದ ಮಾಸಿಕ ಬಡ್ಡಿ ನೀಡುವ ನಿಬಂಧನೆಯಲ್ಲಿ ನಿರಖು ಠೇವಣಿಗಳನ್ನು ಸಂಗ್ರಹಿಸಿತ್ತು. ಆದರೆ ಕಳೆದ 6 ತಿಂಗಳಿನಿಂದ ಗ್ರಾಹಕರಿಗೆ ಠೇವಣಿ ಹಣ ಕೇಳಿದರೂ ಮರುಪಾವತಿಸುತ್ತಿರಲಿಲ್ಲ.
ಇದರಿಂದ ಅನುಮಾನಗೊಂಡ ಗ್ರಾಹಕರು ಒಟ್ಟಾಗಿ ವಿಚಾರಿಸಿದಾಗಲೂ ಸಮರ್ಪಕ ಮಾಹಿತಿ ದೊರೆಯಲಿಲ್ಲ.
ಗುರುವಾರ ಸಹಕಾರಿ ಇಲಾಖೆಯ ಉಡುಪಿಯ ಸೌಹಾರ್ದ ಸೊಸೈಟಿಗಳ ಸಂಯೋಜಕ ಅಧಿಕಾರಿ ವಿಜಯ್ ಅವರು ಸಂಸ್ಥೆಗೆ ಆಗಮಿಸಿ ತನಿಖೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ಸುಮಾರು 30 ಮಂದಿಗೆ 2.11 ಕೋ.ರೂ. ಪಾವತಿಗೆ ಬಾಕಿ ಇರುವುದಾಗಿ ಲೆಕ್ಕ ದೊರೆತಿದೆ.
ಗ್ರಾಹಕರು ಠೇವಣಿ ಇಟ್ಟ ಹಣವನ್ನು ಶೇ. 90ರಷ್ಟು ನಕಲಿ ಖಾತೆಗಳನ್ನು ತೆರೆದು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಸಂಸ್ಥೆಯ ಅಧ್ಯಕ್ಷರು ಕಾಲಾವಕಾಶ ಕೋರಿದ್ದು ಮರುಪಾವತಿಸುವುದಾಗಿ ಭರವಸೆ ನೀಡಿದ್ದಾರೆ.
ಮಹಿಳೆಯೊಬ್ಬರು ಮಗುವಿನ ಚಿಕಿತ್ಸೆಗಾಗಿ ಕೂಡಿಟ್ಟ ಹಣ, ಹಿರಿಯ ನಾಗರಿಕರು ನಿವೃತ್ತಿ ವೇಳೆ ದೊರೆತ ಇಡುಗಂಟು ಸೇರಿದಂತೆ ಒಂದಷ್ಟು ಮಂದಿ ಬೇರೆ ಬೇರೆ ಕಷ್ಟದ ಹಣವನ್ನು ಇಲ್ಲಿ ಮಾಸಿಕ ಬಡ್ಡಿಯ ಆಧಾರದಲ್ಲಿ ಇಟ್ಟಿದ್ದರು. 6 ತಿಂಗಳಿಂದ ಬೇಡಿಕೆ ಇಡುತ್ತಿರುವ ಠೇವಣಿದಾರರು ಸ್ವಲ್ಪ ಸ್ವಲ್ಪವಾದರೂ ಮರುಪಾವತಿಸಿ, ಏಕಕಾಲದಲ್ಲಿ ಕೊಡಬೇಕಿಲ್ಲ ಎಂದು ಮನವಿ ಮಾಡಿದ್ದರು. ಚಿನ್ನಾಭರಣ ಅಡವು ಕುರಿತಂತೆಯೂ ಗ್ರಾಹಕರಿಗೆ ಸಂಶಯ ಇದ್ದು, ತನಿಖೆ ಬಳಿಕ ವಂಚನೆ ಇದ್ದರೆ ದೃಢಪಡಲಿದೆ. ಠೇವಣಿ ಹಣ ದುರುಪಯೋಗವಾಗಿದೆ, ಅಧ್ಯಕ್ಷರು ಹಾಗೂ ನಿರ್ದೇಶಕರು ಇದಕ್ಕೆ ಜವಾಬ್ದಾರರಾಗಿದ್ದು, ಇಲಾಖೆಗೆ ವರದಿ ಮಾಡಲಾಗುವುದು. ಅಲ್ಲಿಂದ ಟಾಸ್ಕ್ಫೋರ್ಸ್ ಆಗಮಿಸಿ ಕೂಲಂಕಷ ತನಿಖೆ ನಡೆಯಲಿದೆ ಎಂದು ಅಧಿಕಾರಿ ವಿಜಯ್ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.