Advertisement

Google review Tasks ಹೆಸರಿನಲ್ಲಿ 2.07 ಲ.ರೂ. ವಂಚನೆ

11:59 PM Jun 24, 2023 | Team Udayavani |

ಮಂಗಳೂರು: ಗೂಗಲ್‌ ರಿವ್ಯೂ ಟಾಸ್ಕ್ ಹೆಸರಿನಲ್ಲಿ ಅಧಿಕ ಲಾಭದ ಆಸೆ ತೋರಿಸಿ 2.07 ಲ.ರೂ. ವಂಚಿಸಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಜೂ. 20ರಂದು ಅಪರಿಚಿತ ವ್ಯಕ್ತಿ 639387063050 ಸಂಖ್ಯೆಯಿಂದ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಆನ್‌ಲೈನ್‌ ಗೂಗಲ್‌ ರಿವ್ಯೂ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್‌ ನೀಡುವುದಾಗಿ ತಿಳಿಸಿದ್ದ. ಅದರೊಂದಿಗೆ ಕಳುಹಿಸಲಾದ ಲಿಂಕ್‌ ಮೂಲಕ ಟೆಲಿಗ್ರಾಂ ಗ್ರೂಪ್‌ಗೆ ಸೇರ್ಪಡೆಗೊಳ್ಳಲು ತಿಳಿಸಿದ್ದ. ಅದರಂತೆ ದೂರುದಾರರು ಗ್ರೂಪ್‌ಗೆ ಸೇರ್ಪಡೆಗೊಂಡಿದ್ದರು. ಅವರಿಗೆ ನೀಡಲಾದ ಎರಡು ಟಾಸ್ಕ್ ಗಳನ್ನು ಪೂರ್ಣಗೊಳಿಸಿದ್ದರು. ಒಂದು ಟಾಸ್ಕ್ ಗೆ 150 ರೂ.ಗಳಂತೆ 300 ರೂ.ಗಳನ್ನು ಅಪರಿಚಿತ ವ್ಯಕ್ತಿ ದೂರುದಾರರ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದ. ಅನಂತರ ಇನ್ನಷ್ಟು ಟಾಸ್ಕ್ ಗಳನ್ನು ಕಳುಹಿಸಿಕೊಟ್ಟು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್‌ ನೀಡುವುದಾಗಿ ತಿಳಿಸಿದ್ದ. ಇದನ್ನು ನಂಬಿದ ದೂರುದಾರ ಜೂ. 21ರಂದು 1,000 ರೂ.ಗಳನ್ನು ಕಳುಹಿಸಿದ್ದರು. ಅನಂತರ ಹಂತ ಹಂತವಾಗಿ ಒಟ್ಟು 2,07,300 ರೂ.ಗಳನ್ನು ವರ್ಗಾಯಿಸಿದ್ದರು. ಆದರೆ ಅವರಿಗೆ ಅಪರಿಚಿತ ವ್ಯಕ್ತಿ ಯಾವುದೇ ಲಾಭದ ಹಣ ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಕೌಂಟೆಂಟ್‌ನಿಂದ ಮೋಸ: ದೂರು ದಾಖಲು
ಮಂಗಳೂರು: ಕೋಡ್‌ ಕ್ರಾಫ್ಟ್‌ ಟೆಕ್ನಾಲಜೀಸ್‌ ಎನ್ನುವ ಸಂಸ್ಥೆಯಲ್ಲಿ ಆಕೌಂಟೆಂಟ್‌ ಅಗಿ ಕೆಲಸ ಮಾಡುತ್ತಿದ್ದ ಸಂತೋಷ್‌ ಕೋಟ್ಯಾನ್‌ ಹಣದ ವ್ಯವಹಾರದಲ್ಲಿ ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ಮಾಲಕ ದೀಕ್ಷಿತ್‌ ರೈ ಎನ್ನುವವರು ಬಂದರು ಠಾಣೆಗೆ ದೂರು ನೀಡಿದ್ದಾರೆ.

2016ರಿಂದ 2022ರ ವರೆಗೆ ಸಂಸ್ಥೆಯ ಹಣದ ಸಂಪೂರ್ಣ ವ್ಯವಹಾರವನ್ನು ಸಂತೋಷ್‌ ಅವರೇ ನೋಡಿಕೊಳ್ಳುತ್ತಿದ್ದರು. 2022ರ ಅನಂತರ ಹೊಸ ಅಕೌಂಟೆಂಟ್‌ ನೇಮಕವಾಗಿದ್ದು, ಅವರು ಹಣದ ವ್ಯವಹಾರದ ಬಗ್ಗೆ ಪರಿಶೀಲಿಸುವ ವೇಳೆ ಹಣದ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಮಾಲಕರಿಗೆ ತಿಳಿಸಿದ್ದು, ಸಂತೋಷ್‌ ಅವರಲ್ಲಿ ವಿಚಾರಿಸಿದಾಗ ಒಪ್ಪಿಕೊಂಡಿದ್ದಾರೆ. ಮತ್ತೆ ಪರಿಶೀಲಿಸಿದಾಗ ಹೆಚ್ಚಿನ ಮೊತ್ತವನ್ನು ಸಂಸ್ಥೆಗೆ ನೀಡದೆ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ನಷ್ಟ ಉಂಟು ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಾಡಿಗೆಗೆಂದು ಕಾರು ಪಡೆದು ಮಾರಾಟ
ಮಂಗಳೂರು: ಫ‌ಳ್ನೀರ್‌ನಲ್ಲಿರುವ ಕಾರು ಬಾಡಿಗೆಗೆ ನೀಡುವ ಸಂಸ್ಥೆಯೊಂದರಿಂದ ಕಾರು ಪಡೆದು ಅದನ್ನು ಮಾರಾಟ ಮಾಡಿರುವ ಕುರಿತಂತೆ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಂಟ್ವಾಳದ ಯಕ್ಷಿತ್‌ ಎಂಬಾತ ಕ್ರಿಸ್ಟಾ ಕಾರನ್ನು ಆನ್‌ಲೈನ್‌ ಮೂಲಕ ಕಾಯ್ದಿರಿಸಿ 25 ಸಾವಿರ ರೂ. ಪಾವತಿಸಿದ್ದು, ನಂತರ ಬಾಕಿ ಇರುವ 50 ಸಾವಿರ ರೂ. ನಗದಾಗಿ ನೀಡಿ, ಆಧಾರ್‌ ಕಾರ್ಡ್‌, ಚಾಲನಾ ಪರವಾನಿಗೆ ಮತ್ತು 3 ಬ್ಯಾಂಕ್‌ ಚೆಕ್‌ ಅನ್ನು ನೀಡಿ, 15 ದಿನಗಳಿಗೆ ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ. ಬುಕ್ಕಿಂಗ್‌ ಅವಧಿ ಮುಗಿದಿದ್ದರೂ ಕಾರನ್ನು ಹಿಂತಿರುಗಿ ನೀಡಿಲ್ಲ. ಈ ಬಗ್ಗೆ ಸಂಸ್ಥೆಯ ಮಾಲಕ ಮೊಹಮ್ಮದ್‌ ಹುಸೈನಾರ್‌ ಅವರು ಕರೆ ಮಾಡಿದಾಗ ಕರೆಗೆ ಆತ ಸ್ಪಂದಿಸಿಲ್ಲ. ಜಿಪಿಎಸ್‌ ಮೂಲಕ ಪರಿಶೀಲಿಸಿದಾಗ ಕಾರು ವಿಜಯಪುರದಲ್ಲಿರುವುದು ಕಂಡು ಬಂದಿದ್ದು, ಯಕ್ಷಿತ್‌ ಜತೆ ಹರೀಶ್‌ ಎಂಬಾತ ಸೇರಿ ಆಧಾರ್‌ ಕಾರ್ಡನ್ನು ನಕಲು ಮಾಡಿ ವಿಜಯಪುರದ ವ್ಯಕ್ತಿಗೆ ಮಾರಾಟ ಒಪ್ಪಂದ ಮಾಡಿ 7 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next