Advertisement

1ನೇ ಏಕದಿನ: ಕಿವೀಸ್‌ ಗೆಲ್ಲಿಸಿದ ಟಾಮ್‌-ಟೇಲರ್‌

06:30 AM Oct 23, 2017 | Team Udayavani |

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯ 31ನೇ ಶತಕ, 200ನೇ ಪಂದ್ಯದಲ್ಲಿ 8888 ರನ್‌ಗಳ ವಿಶ್ವದಾಖಲೆ, ಇಷ್ಟೆಲ್ಲ ಮಾಡಿದರೂ ಅದನ್ನು ಮಣ್ಣುಪಾಲು ಮಾಡಿದ ನ್ಯೂಜಿಲೆಂಡ್‌ನ‌ ಟಾಮ್‌ ಲ್ಯಾಥಮ್‌, ರಾಸ್‌ಟೇಲರ್‌, ಇವೆಲ್ಲದರ ಪರಿಣಾಮ ಮೊದಲ ಏಕದಿನದಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ಗಳ ಸೋಲನುಭವಿಸಿದ ಭಾರತ…ಇವಿಷ್ಟು ಭಾರತ-ಕಿವೀಸ್‌ ನಡುವಿನ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದ ಮುಖ್ಯಾಂಶಗಳು.

Advertisement

ಈ ಪಂದ್ಯದಲ್ಲಿ ಕೊಹ್ಲಿ ಶತಕ ಗಳಿಸಿದರೂ ಇತರೆ ಬ್ಯಾಟ್ಸ್‌ಮನ್‌ಗಳು ವಿಫ‌ಲರಾಗಿದ್ದು ತಂಡದ ರನ್‌ ಗತಿಯನ್ನು ಕುಸಿಯುವಂತೆ ಮಾಡಿತು. ಪರಿಣಾಮ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಒಟ್ಟು 50 ಓವರ್‌ಗಳಲ್ಲಿ ಮುಗಿದಾಗ 8 ವಿಕೆಟ್‌ ಕಳೆದುಕೊಂಡು 280 ರನ್‌ ಮಾತ್ರ ಗಳಿಸಿತು. ಈ ಮೊತ್ತವನ್ನು ಇನ್ನೂ 6 ಎಸೆತ ಬಾಕಿಯಿರುವಂತೆ ಬೆನ್ನತ್ತಿದ ಕಿವೀಸ್‌ 49 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 284 ರನ್‌ ಗಳಿಸಿತು.

ಭಾರತದ ನೀಡಿದ 281 ರನ್‌ ಬೆನ್ನತ್ತಿ ಹೊರಟ ಕಿವೀಸ್‌ ಎಲ್ಲೂ ತಿಣುಕಾಡಲಿಲ್ಲ. 80 ರನ್‌ಗೆ 3 ವಿಕೆಟ್‌ ಕಳೆದುಕೊಂಡರೂ ಅದರ ಲಾಭ ಪಡೆದುಕೊಳ್ಳಲು ಟಾಮ್‌ ಲ್ಯಾಥಮ್‌ ಮತ್ತು ರಾಸ್‌ ಟೇಲರ್‌ ಬಿಡಲಿಲ್ಲ. ಆ ಇಬ್ಬರೂ ಕೂಡಿಕೊಂಡು 4ನೇ ವಿಕೆಟ್‌ಗೆ ಸರಿಯಾಗಿ 200 ರನ್‌ ಜೊತೆಯಾಟವಾಡಿದರು. ಲ್ಯಾಥಮ್‌ 102 ಎಸೆತದಲ್ಲಿ 8 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 103 ರನ್‌ಗಳಿಸಿ ಅಜೇಯವಾಗುಳಿದರು. ಕಡೆಯ ಹಂತದಲ್ಲಿ ಶತಕ ಗಳಿಸಲು ಕೇವಲ 5 ರನ್‌ ಕೊರತೆ ಎದುರಿಸಿದ ರಾಸ್‌ ಟೇಲರ್‌ ಇದೇ ಒತ್ತಡದಲ್ಲಿ ಔಟಾಗಿದ್ದೊಂದು ಮಾತ್ರ ಕಿವೀಸ್‌ ಪಾಳೆಯಕ್ಕೆದುರಾದ ನಿರಾಸೆ. ಆಗ ತಂಡಕ್ಕೆ ಬೇಕಿದ್ದದ್ದು ಕೇವಲ 1 ರನ್‌ ಮಾತ್ರ. ಮುಂದೆ ಕ್ರೀಸ್‌ಗಿಳಿದ ನಿಕೋಲ್ಸ್‌ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಪಂದ್ಯವನ್ನು ಮುಗಿಸಿದರು.

ಭಾರತ ನಿಧಾನಗತಿಯ ರನ್‌: ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ ಕೇವಲ 16 ರನ್‌ಗಳಾಗಿದ್ದಾಗ ಶಿಖರ್‌ ಧವನ್‌ ಔಟಾದರು. ಆಗ ಅವರ ಗಳಿಕೆ 9 ರನ್‌. ಮತ್ತೂಂದು ಕಡೆ ಸ್ಫೋಟಕ ಫಾರ್ಮ್ನಲ್ಲಿರುವ ರೋಹಿತ್‌ ಶರ್ಮ ಕೂಡ ಕೇವಲ 20 ರನ್‌ಗೆ ಔಟಾಗಿ ಮುಂಬೈ ಅಭಿಮಾನಿಗಳಿಗೆ ಬೇಸರ ಮೂಡಿಸಿದರು. 

ರೋಹಿತ್‌ ಮುಂಬೈನವರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.ಕೇದಾರ್‌ ಜಾಧವ್‌ ತಮಗೆ ಸಿಕ್ಕ ಮತ್ತೂಂದು ಅವಕಾಶವನ್ನು ವ್ಯರ್ಥ ಮಾಡಿಕೊಂಡರು. ಸ್ಯಾಂಟ್ನರ್‌ ಎಸೆತದಲ್ಲಿ ಅವರಿಗೇ ಕ್ಯಾಚ್‌ ನೀಡಿ ಔಟಾದ ಕೇದಾರ್‌ ಆಗ 12 ರನ್‌ ಗಳಿಸಿದ್ದರು. ಅಪರೂಪಕ್ಕೆ ತಂಡದಲ್ಲಿ ಸ್ಥಾನ ಪಡೆದ ದಿನೇಶ್‌ ಕಾರ್ತಿಕ್‌ ನ್ಯೂಜಿಲೆಂಡ್‌ ದಾಳಿಗೆ ಸೆಡ್ಡು ಹೊಡೆಯುವ ಯತ್ನ ನಡೆಸಿದರು. ಅವರು ಶತಕ ಧಾರಿ ನಾಯಕ ಕೊಹ್ಲಿಯೊಂದಿಗೆ ಸೇರಿಕೊಂಡು ನಿಧಾನಕ್ಕೆ ತಂಡದ ಮೊತ್ತ ಏರಿಸಿದರು. ದಿನೇಶ್‌ ಔಟಾಗುವ ಮುನ್ನ 37 ರನ್‌ ಗಳಿಸಿದರು. ಈ ವೇಳೆ ನಾಯಕ ಕೊಹ್ಲಿಗೆ ಮಾಜಿ ನಾಯಕ ಧೋನಿ ಜೊತೆ ನೀಡಿದರು.

Advertisement

ಇಬ್ಬರೂ ಸೇರಿಕೊಂಡು ಭಾರತದ ಮೊತ್ತವನುನ ಏರಿಸುತ್ತಾರೆಂಬ ಆಸೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದರೆ ನಡೆದಿದ್ದು ಅದಕ್ಕೆ ಸರಿ ಉಲ್ಟಾ. ಧೋನಿ ಮತ್ತೂಮ್ಮೆ ನಿಧಾನಗತಿಯ ಬ್ಯಾಟಿಂಗ್‌ ಪ್ರದರ್ಶಿಸಿ 42 ಎಸೆತಕ್ಕೆ 25 ರನ್‌ ಗಳಿಸಿ ಕೆಟ್ಟ ಹೊಡೆತಕ್ಕೆ ಔಟಾಗಿ ಮರಳಿದರು. ಇದು ಹೋರಾಟವನ್ನು ಚಾಲ್ತಿಯಲ್ಲಿದ್ದ ನಾಯಕ ಕೊಹ್ಲಿಯನ್ನು ಏಕಾಂಗಿಯಾಗಿಸಿತು.

ಈ ಪಂದ್ಯದಲ್ಲಿ ಕೊಹ್ಲಿ ಬಹುತೇಕ ಕೊನೆಯ ಓವರ್‌ನವರೆಗೆ ಕ್ರೀಸ್‌ನಲ್ಲಿದ್ದು 125 ಎಸೆತಕ್ಕೆ 121 ರನ್‌ ಗಳಿಸಿದರು. ಈ ಮೊತ್ತದಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳು ಸೇರಿದ್ದವು. ಆದರೂ ಕೊಹ್ಲಿಯ ಈ ಇನಿಂಗ್ಸ್‌ ಬಹಳ ನಿಧಾನವಾಗಿತ್ತು ಎನ್ನದೇ ವಿಧಿಯಿಲ್ಲ. ಅವರು ಬಹುತೇಕ ಎಸೆತಕ್ಕೊಂದರಂತೆ ರನ್‌ ಗಳಿಸಿದರು. ಕೊನೆಯ ಹಂತದಲ್ಲೂ ರನ್‌ಗತಿ ಏರಿಸಲು ವಿಫ‌ಲರಾದರು. ಇದು ಭಾರತದ ಮೊತ್ತವನ್ನು ಧರಾಶಾಯಿಯಾಗಿಸಿತು.

ಪಾಂಡೆ ಬದಲು ಕಾರ್ತಿಕ್‌
ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸರದಿಗೊಂದು ಪರಿಹಾರ ಕಂಡುಹುಡುಕುವ ಯೋಜನೆಯಲ್ಲಿರುವ ಟೀಮ್‌ ಇಂಡಿಯಾ, ಅಚ್ಚರಿಯ ನಡೆಯೊಂದರಲ್ಲಿ ಮುಂಬಯಿ ಪಂದ್ಯಕ್ಕಾಗಿ ಮನೀಷ್‌ ಪಾಂಡೆ ಅವರನ್ನು ಕೈಬಿಟ್ಟು ದಿನೇಶ್‌ ಕಾರ್ತಿಕ್‌ ಅವರನ್ನು ಆಡಿಸಿತು. ಕಾರ್ತಿಕ್‌ ಇದೇ ವರ್ಷದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಕಿಂಗ್‌ಸ್ಟನ್‌ನಲ್ಲಿ ಕೊನೆಯ ಸಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

ಶಿಖರ್‌ ಧವನ್‌ ತಂಡಕ್ಕೆ ಮರಳಿದ್ದರಿಂದ ಅಜಿಂಕ್ಯ ರಹಾನೆ ಜಾಗ ಖಾಲಿ ಮಾಡಬೇಕಾಯಿತು. ರಹಾನೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ರೋಹಿತ್‌ ಶರ್ಮ ಜತೆ ಆರಂಭಿಕನಾಗಿ ಇಳಿದು ಸತತ 4 ಅರ್ಧ ಶತಕ ಬಾರಿಸಿ ಮಿಂಚಿದ್ದರು. ರಹಾನೆ ಟೀಮ್‌ ಇಂಡಿಯಾದ ತೃತೀಯ ಓಪನರ್‌ ಎಂದು ಮುಂಬಯಿ ಪಂದ್ಯಕ್ಕೂ ಮೊದಲೇ ನಾಯಕ ಕೊಹ್ಲಿ ಸ್ಪಷ್ಟಪಡಿಸಿದ್ದರು.

ಸ್ಕೋರ್‌ಪಟ್ಟಿ
ಭಾರತ

ರೋಹಿತ್‌ ಶರ್ಮ    ಬಿ ಬೌಲ್ಟ್    20
ಶಿಖರ್‌ ಧವನ್‌    ಸಿ ಲ್ಯಾಥಂ ಬಿ ಬೌಲ್ಟ್    9
ವಿರಾಟ್‌ ಕೊಹ್ಲಿ    ಸಿ ಬೌಲ್ಟ್ ಬಿ ಸೌಥಿ    121
ಕೇದಾರ್‌ ಜಾಧವ್‌    ಸಿ ಮತ್ತು ಬಿ ಸ್ಯಾಂಟ್ನರ್‌    12
ದಿನೇಶ್‌ ಕಾರ್ತಿಕ್‌    ಸಿ ಮುನ್ರೊ ಬಿ ಸೌಥಿ    37
ಎಂ.ಎಸ್‌. ಧೋನಿ    ಸಿ ಗಪ್ಟಿಲ್‌ ಬಿ ಬೌಲ್ಟ್    25
ಹಾರ್ದಿಕ್‌ ಪಾಂಡ್ಯ    ಸಿ ವಿಲಿಯಮ್ಸನ್‌ ಬಿ ಬೌಲ್ಟ್    16
ಭುವನೇಶ್ವರ್‌ ಕುಮಾರ್‌    ಸಿ ನಿಕೋಲ್ಸ್‌ ಬಿ ಸೌಥಿ    26
ಕುಲದೀಪ್‌ ಯಾದವ್‌    ಔಟಾಗದೆ    0
ಇತರ        14
ಒಟ್ಟು  (50 ಓವರ್‌ಗಳಲ್ಲಿ 8 ವಿಕೆಟಿಗೆ)        280
ವಿಕೆಟ್‌ ಪತನ: 1-16, 2-29, 3-71, 4-144, 5-201, 6-238, 7-270, 8-280.
ಬೌಲಿಂಗ್‌:
ಟಿಮ್‌ ಸೌಥಿ        10-0-73-3
ಟ್ರೆಂಟ್‌ ಬೌಲ್ಟ್        10-1-35-4
ಆ್ಯಡಂ ಮಿಲೆ°        9-0-62-0
ಮಿಚೆಲ್‌ ಸ್ಯಾಂಟ್ನರ್‌        10-0-41-1
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌        4-0-27-0
ಕಾಲಿನ್‌ ಮುನ್ರೊ        7-0-38-0

ನ್ಯೂಜಿಲೆಂಡ್‌ 49 ಓವರ್‌, 284/4
ಮಾರ್ಟಿನ್‌ ಗಪ್ಟಿಲ್‌  ಸಿ ಕಾರ್ತಿಕ್‌ ಬಿ ಪಾಂಡ್ಯ    32
ಕಾಲಿನ್‌ ಮನ್ರೊà ಸಿ ಕಾರ್ತಿಕ್‌ ಬಿ ಬುಮ್ರಾ    28
ಕೇನ್‌ ವಿಲಿಯಮ್ಸನ್‌ ಸಿ ಜಾಧವ್‌ ಬಿ ಕುಲದೀಪ್‌    6
ರಾಸ್‌ ಟೇಲರ್‌ ಸಿ ಚಹಲ್‌ ಬಿ ಭುವನೇಶ್ವರ್‌    95
ಟಾಮ್‌ ಲ್ಯಾಥಮ್‌ ಅಜೇಯ 103
ಹೆನ್ರಿ ನಿಕೋಲ್ಸ್‌    ಅಜೇಯ    4
ಇತರೆ    14
ವಿಕೆಟ್‌ ಪತನ: 1-48, 2-62, 3-80
ಬೌಲಿಂಗ್‌
ಭುವನೇಶ್ವರ್‌    10    0    56    1
ಜಸ್‌ಪ್ರೀತ್‌ ಬುಮ್ರಾ    9    0    55    1
ಕುಲದೀಪ್‌ ಯಾದವ್‌    10    0    64    1
ಹಾರ್ದಿಕ್‌ ಪಾಂಡ್ಯ    10    0    46    1
ಯಜುವೇಂದ್ರ ಚಹಲ್‌    10    0    51    0

ವಿರಾಟ್‌ ಕೊಹ್ಲಿ 200 ಪಂದ್ಯ, 31 ಶತಕ, 8,888 ರನ್‌!
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ತಮ್ಮ 200ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯಗೊಳಿಸಿದರು. 31ನೇ ಶತಕ, 200ನೇ ಪಂದ್ಯದಲ್ಲಿ ಶತಕ, 200 ಪಂದ್ಯಗಳಲ್ಲಿ ಸರ್ವಾಧಿಕ ರನ್‌ ವಿಶ್ವದಾಖಲೆಗಳೆಲ್ಲ ಕೊಹ್ಲಿ ಪಾಲಿನ ಹೆಗ್ಗಳಿಕೆ. 
ವಿರಾಟ್‌ ಕೊಹ್ಲಿ 121 ರನ್‌ ಬಾರಿಸಿ ತಮ್ಮ 31ನೇ ಶತಕ ಸಂಭ್ರಮವನ್ನು ಆಚರಿಸಿದರು. ಕೊಹ್ಲಿ 200ನೇ ಪಂದ್ಯದಲ್ಲಿ ಶತಕ ದಾಖಲಿಸಿದ ವಿಶ್ವದ ಕೇವಲ 2ನೇ ಕ್ರಿಕೆಟಿಗ. ಎಬಿ ಡಿ ವಿಲಿಯರ್ ಮೊದಲಿಗ. ಎಬಿಡಿ ಕಳೆದ ವರ್ಷ ಇಂಗ್ಲೆಂಡ್‌ ಎದುರಿನ ಕೇಪ್‌ಟೌನ್‌ ಪಂದ್ಯದಲ್ಲಿ ಅಜೇಯ 101 ರನ್‌ ಬಾರಿಸಿದ್ದರು.

ಎಬಿಡಿ ದಾಖಲೆ ಪತನ
ಈ ಸಾಧನೆಯೊಂದಿಗೆ ಮೊದಲ 200 ಪಂದ್ಯಗಳಲ್ಲಿ ಅತ್ಯಧಿಕ ರನ್‌ ಹಾಗೂ ಅತೀ ಹೆಚ್ಚು ಶತಕ ಬಾರಿಸಿದ ವಿಶ್ವದಾಖಲೆಗೂ ಕೊಹ್ಲಿ ಅಧಿಕೃತ ಮುದ್ರೆ ಒತ್ತಿದರು. ಈ ಇನ್ನಿಂಗ್ಸ್‌ ಮುಗಿದಾಗ ಕೊಹ್ಲಿ ಅವರ ಒಟ್ಟು ಗಳಿಕೆ ಎಷ್ಟು ಗೊತ್ತೇ? ಸರಿಯಾಗಿ 8,888 ರನ್‌! ಈ ಎರಡೂ ಸಾಧನೆಗಳ ವೇಳೆ ಎಬಿ ಡಿ ವಿಲಿಯರ್ ದಾಖಲೆ ಪತನಗೊಂಡಿತು. ಎಬಿಡಿ 200 ಪಂದ್ಯಗಳಲ್ಲಿ 8,621 ರನ್‌ ಹಾಗೂ 24 ಸೆಂಚುರಿ ಬಾರಿಸಿದ್ದರು. 158 ಪಂದ್ಯಗಳಿಂದ 7,381 ರನ್‌ ಹಾಗೂ 26 ಸೆಂಚುರಿ ಹೊಡೆದಿರುವ ಹಾಶಿಮ್‌ ಆಮ್ಲ ಕೊಹ್ಲಿಯ ಹಿಂದೆಯೇ ಇದ್ದಾರೆ ಎಂಬುದನ್ನು ಗಮನಿಸಬೇಕು!

ಸೆಂಚುರಿ ನಂ. 31
ಇದು ವಿರಾಟ್‌ ಕೊಹ್ಲಿ ಅವರ 31ನೇ ಶತಕ. ಈ ಸಾಧನೆಯೊಂದಿಗೆ ಅವರು ಸರ್ವಾಧಿಕ ಶತಕ ವೀರರ ಯಾದಿಯಲ್ಲಿ 2ನೇ ಸ್ಥಾನ ಅಲಂಕರಿಸಿದರು. 30 ಶತಕ ಹೊಡೆದಿರುವ ರಿಕಿ ಪಾಂಟಿಂಗ್‌ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು. 49 ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿರುವ ಸಚಿನ್‌ ತೆಂಡುಲ್ಕರ್‌ ಅನಂತರದ ಸ್ಥಾನದಲ್ಲೀಗ ಕೊಹ್ಲಿ ವಿರಾಜಮಾನರಾಗಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next