Advertisement

1ನೇ ತರಗತಿ ದಾಖಲಾತಿ ವಯಸ್ಸು: ಈ ಬಾರಿಯೂ ಗೊಂದಲ

06:00 AM Apr 29, 2018 | |

ಉಡುಪಿ: ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಜೂ. 1ಕ್ಕೆ 5 ವರ್ಷ 10 ತಿಂಗಳು ಪೂರ್ಣಗೊಂಡಿರಬೇಕು ಎಂಬ ನಿಯಮ ಈ ಶೈಕ್ಷಣಿಕ ಸಾಲಿನಲ್ಲಿಯೂ ಗೊಂದಲ ಸೃಷ್ಟಿಸಿದೆ. ಕಳೆದ ಬಾರಿ ಇಂಥ ಪರಿಸ್ಥಿತಿ ಉಂಟಾದಾಗ ಇಲಾಖೆ ನಿಯಮ ಮಾರ್ಪಡಿಸಿ ವಯಸ್ಸನ್ನು 5 ವರ್ಷ 5 ತಿಂಗಳಿಗೆ ಮರು ನಿಗದಿಗೊಳಿಸಿತ್ತು. ಆದರೆ ಈ ಬಾರಿ ಇದುವರೆಗೆ ಅಂತಹ ಮಾರ್ಪಾಡು ಆದೇಶ ಬಂದಿಲ್ಲ.

Advertisement

ಕಳೆದ ಶೈಕ್ಷಣಿಕ ವರ್ಷದ ಆರಂಭಕ್ಕೆ ಇಲಾಖೆ ಹೊರಡಿಸಿದ್ದ ಆದೇಶದಲ್ಲಿ 1ನೇ ತರಗತಿಗೆ ದಾಖಲಾಗಲು 5 ವರ್ಷ 10 ತಿಂಗಳು, ಎಲ್‌ಕೆಜಿಗೆ 3 ವರ್ಷ 10 ತಿಂಗಳು ಎಂದು ನಿಗದಿಗೊಳಿಸಿತ್ತು. ಇದಕ್ಕೆ ಆಕ್ಷೇಪ ಬಂದ ಬಳಿಕ ಹೊಸ ಸುತ್ತೋಲೆ ಹೊರಡಿಸಿ, ಒಂದನೇ ತರಗತಿಗೆ 5 ವರ್ಷ 5 ತಿಂಗಳು ಎಂದು ನಿಗದಿಪಡಿಸಿತ್ತು. ಎಲ್‌ಕೆಜಿಗೆ ಇದ್ದ ಮಿತಿ 3 ವರ್ಷ 10 ತಿಂಗಳನ್ನು ಹಾಗೆಯೇ ಮುಂದುವರಿಸಲು ತಿಳಿಸಲಾಗಿತ್ತು. 2015-16ನೇ ಹಾಗೂ 2016-17ನೇ ಸಾಲಿನಲ್ಲಿ 3 ವರ್ಷ 10 ತಿಂಗಳು ತುಂಬದೆಯೂ ಎಲ್‌ಕೆಜಿಗೆ ದಾಖಲಾದ ಮಕ್ಕಳು ಒಂದನೆಗೆ ದಾಖಲಾಗಬಹುದು, ಅವರಿಗೆ 5 ವರ್ಷ 10 ತಿಂಗಳಿನ ವಯೋಮಿತಿ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಕಳೆದ ವರ್ಷ ಯುಕೆಜಿಯಲ್ಲಿ ಇದ್ದ ಮಕ್ಕಳು ಈ ವರ್ಷ ಒಂದನೇ ತರಗತಿಗೆ ದಾಖಲಾಗುವಾಗ ಕೆಲವು ಶಾಲೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಹಾಗಾಗಿ ಹೆತ್ತವರಲ್ಲಿ ಆತಂಕ ಉಳಿದುಕೊಂಡಿದೆ.

ಎಲ್‌ಕೆಜಿಗೆ 3 ವರ್ಷ 10 ತಿಂಗಳು ಕಳೆದ ವರ್ಷ ಕಡ್ಡಾಯಗೊಳಿಸಲಾಗಿತ್ತಾದರೂ ಕೆಲವು ಶಾಲೆಗಳು ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಾಯದ ಮಕ್ಕಳನ್ನು ನಾನಾ ಕಾರಣದ (ಒತ್ತಡ, ಹೆತ್ತವರ ನಿರಂತರ ಮನವಿ ಇತ್ಯಾದಿ) ಹಿನ್ನೆಲೆಯಲ್ಲಿ ದಾಖಲಿಸಿಕೊಂಡಿ
ದ್ದವು. ಆ ಮಕ್ಕಳು ಈಗ ಯುಕೆಜಿಗೆ ಬಂದಿವೆ. ಮುಂದಿನ ವರ್ಷ ಅವರು ಒಂದನೆಗೆ ದಾಖಲಾಗುವ ಸಂದರ್ಭದಲ್ಲಿ ಮತ್ತೆ ಗೊಂದಲ ಉಂಟಾ ಗುತ್ತದೆ.  

“ರಿಸ್ಕ್’ ಮೇಲೆ ದಾಖಲಾತಿ
5 ವರ್ಷ 10 ತಿಂಗಳಿಗಿಂತ ಕಡಿಮೆ ಇದ್ದರೆ 1ನೇ ತರಗತಿಗೆ ದಾಖಲಾತಿ ಇಲ್ಲ ಎಂದು ಅನೇಕ ಶಾಲೆಗಳು ಮಕ್ಕಳನ್ನು ವಾಪಸು ಕಳುಹಿಸಿವೆ. ಇನ್ನು ಕೆಲವು ಶಾಲೆಗಳು “ರಿಸ್ಕ್’ ತೆಗೆದುಕೊಂಡು ದಾಖಲಾತಿ ಮಾಡಿಕೊಂಡಿವೆ. “ಒಂದು ವೇಳೆ ಶಿಕ್ಷಣ ಇಲಾಖೆ ವಯೋಮಿತಿಯನ್ನು ಇಳಿಕೆ ಮಾಡದಿದ್ದರೆ ನಿಮ್ಮ ಮಗುವನ್ನು 2ನೇ ತರಗತಿಯಲ್ಲಿ ಒಂದು ವರ್ಷ ಇರಿಸಿಕೊಳ್ಳುತ್ತೇವೆ. ಇಲ್ಲವಾದರೆ ಮುಂದೆ ಎಸೆಸೆಲ್ಸಿಗೆ ಸಮಸ್ಯೆಯಾಗುತ್ತದೆ’ ಎಂದು ತಿಳಿಸಿದ್ದಾರೆ. ಇದಕ್ಕೆ ಅನೇಕ ಹೆತ್ತವರು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಠ್ಯಪುಸ್ತಕಗಳನ್ನು ಮಕ್ಕಳ ಮನೋವೈಜ್ಞಾನಿಕ ಸಾಮರ್ಥ್ಯದ ಆಧಾರದಲ್ಲಿ ರೂಪಿಸಲಾಗಿರುತ್ತದೆ. ಹಾಗಾಗಿ ನಿಗದಿತ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದಾಖಲು ಮಾಡಿಕೊಂಡರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೆ ಆರ್‌ಟಿಇ ಕಾಯಿದೆಯಡಿ ಎಲ್‌ಕೆಜಿಗೆ 3 ವರ್ಷ 10 ತಿಂಗಳು, ಒಂದನೇ ತರಗತಿಗೆ 10 ತಿಂಗಳು ಅಗತ್ಯ ಎಂದು ತಿಳಿಸಿದ್ದು, ಆ ಹಿನ್ನೆಲೆಯಲ್ಲಿಯೂ ವಯಸ್ಸಿನ ಮಿತಿ ನಿಗದಿಗೊಳಿಸಿರಬಹುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಯೋರ್ವರು ಅಭಿಪ್ರಾಯಪಟ್ಟಿದ್ದಾರೆ. ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಆಯಾ ಶೈಕ್ಷಣಿಕ ವರ್ಷದ ಮಾ. 31ಕ್ಕೆ 15 ವರ್ಷ ಆಗಿರಬೇಕು ಎಂಬ ನಿಯಮವೂ ಇದೆ. 

Advertisement

ಹಣ ಪಾವತಿಯಾಗಿತ್ತು, ವಯಸ್ಸು ಗೊತ್ತಿಲ್ಲ!
ಈ ಹಿಂದೆ ಒಂದನೆಗೆ 5 ವರ್ಷ 5 ತಿಂಗಳಾದಾಗ ಮಗುವನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ 5 ವರ್ಷ 10 ತಿಂಗಳು ಎಂದು ನಿಗದಿ ಮಾಡಿದ ಅನಂತರ ಗೊಂದಲ ಸೃಷ್ಟಿಯಾಯಿತು. ಗೊಂದಲ ಸರಿಪಡಿಸಲು ಕಳೆದ ಜೂನ್‌ನಲ್ಲಿ ಹೊಸ ಸುತ್ತೋಲೆ ಕಳುಹಿಸಲಾಯಿತು. ಈ ಬಾರಿ ಇದುವರೆಗೂ ಹೊಸ ಆದೇಶ ಬಂದಿಲ್ಲ. ಕಳೆದ ವರ್ಷ ಹೆಚ್ಚಿನ ಎಲ್ಲ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿಯೇ ಎಲ್‌ಕೆಜಿ ದಾಖಲಾತಿ ಬಹುತೇಕ ಪೂರ್ಣಗೊಂಡು ಶುಲ್ಕ ಪಾವತಿಯೂ ಆಗಿತ್ತು. ಈ ಬಾರಿಯೂ ಹೀಗೆಯೇ ಆಗಿದೆ. ದಾಖಲಾತಿ ವಯೋಮಿತಿಯನ್ನು ಶಾಲಾರಂಭಕ್ಕೆ ಕನಿಷ್ಠ ಆರು ತಿಂಗಳು ಮೊದಲೇ ನಿಗದಿಗೊಳಿಸಿ ಆದೇಶ ಹೊರಡಿಸಿದರೆ ಗೊಂದಲ ಉಂಟಾಗದು. ಈ ಬಾರಿಯ ಹೊಸ ಆದೇಶದಲ್ಲಿ ಮುಂದಿನ ಎಲ್ಲ ವರ್ಷಗಳಿಗೂ ಒಂದನೇ ತರಗತಿ ಸೇರ್ಪಡೆಗೆ 5 ವರ್ಷ 5 ತಿಂಗಳು ವಯಸ್ಸಿನ ಮಿತಿ ನಿಗದಿಗೊಳಿಸಬಹುದು ಎಂಬ ನಿರೀಕ್ಷೆಗಳೂ ಇವೆ. 

ಕಳೆದ ಬಾರಿ ಆದೇಶ ನೀಡುವಾಗ 2017-18 ಶೈಕ್ಷಣಿಕ ಸಾಲಿನಲ್ಲಿ ಯುಕೆಜಿಯಲ್ಲಿ ಇರುವ ಮಕ್ಕಳು 4 ವರ್ಷ 10 ತಿಂಗಳಿಗಿಂತ ಕಡಿಮೆ ಇದ್ದರೂ ಮುಂದಿನ ವರ್ಷ ಅವರಿಗೆ ಒಂದನೇ ತರಗತಿಗೆ ಅವಕಾಶ ನೀಡಲಾಗುವುದು (5 ವರ್ಷ 10 ತಿಂಗಳಿಗಿಂತ ಕಡಿಮೆ ಇದ್ದರೂ) ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಅವಕಾಶ ನಿರಾಕರಿಸಲಾಗುತ್ತಿದೆ.
ಸುಧಾಕರ್‌

ಉಡುಪಿ ಕಳೆದ ಸಾಲಿನಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಅನಂತರ ಇಲಾಖೆ ಇನ್ನೊಂದು ಸುತ್ತೋಲೆ ಹೊರಡಿಸಿತ್ತು. ಈ ಬಾರಿಯೂ ಪೋಷಕರ ಆತಂಕವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದೇವೆ, ಬದಲಾವಣೆಯಾಗುವ ನಿರೀಕ್ಷೆ ಇದೆ. ಹೆತ್ತವರು ಗೊಂದಲಕ್ಕೆ ಒಳಗಾಗಬೇಕಾಗಿಲ್ಲ.
ಡಿಡಿಪಿಐ ಉಡುಪಿ

ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next