Advertisement

1998ನೇ ಬ್ಯಾಚ್‌ ಕೆಎಎಸ್‌: 27 ಅಭ್ಯರ್ಥಿಗಳಿಗೆ ನೇಮಕ ಆದೇಶ

12:32 AM Apr 05, 2019 | Sriram |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 1998ನೇ ಸಾಲಿನ ಕೆಎಎಸ್‌ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಪರಿಷ್ಕೃತ ಪಟ್ಟಿ ಪ್ರಕಾರ ಅರ್ಹತೆ ಪಡೆದುಕೊಂಡ 27 ಅಭ್ಯರ್ಥಿಗಳಿಗೆ ನೇಮಕ ಆದೇಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ 2016ರ ಜೂ.21ರಂದು ಹೈಕೋರ್ಟ್‌ ನೀಡಿದ್ದ ಆದೇಶ ಜಾರಿಗೆ ತರದಿರುವುದರ ವಿರುದ್ಧ ಎಸ್‌. ಶ್ರೀನಿವಾಸ್‌ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನ ಹಾಗೂ ನ್ಯಾ. ಎಚ್‌.ಟಿ. ನರೇಂದ್ರಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ಸಲ್ಲಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ, ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಪರಿಷ್ಕೃತ ಪಟ್ಟಿ ಪ್ರಕಾರ ಅರ್ಹತೆ ಪಡೆದುಕೊಂಡಿರುವ 27 ಅಭ್ಯರ್ಥಿಗಳಿಗೆ ಈಗಾಗಲೇ ನೇಮಕ ಆದೇಶ ನೀಡಲಾಗಿದೆ. ಆದರೆ, ಅವರಲ್ಲಿ ಯಾರಿಗೂ ಇಲ್ಲಿವರೆಗೆ ಹುದ್ದೆಗಳನ್ನು ನೀಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಕೇವಲ ನೇಮಕ ಆದೇಶ ನೀಡಿದರೆ ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಅವರಿಗೆ ಹುದ್ದೆಗಳನ್ನು ನೀಡಲೇಬೇಕು. ಅದಕ್ಕಾಗಿ ಏನೇನೂ ಸಬೂಬುಗಳನ್ನು ಹೇಳುವಂತಿಲ್ಲ. ಏಕೆಂದರೆ ಇದೆಲ್ಲ ನಡೆಯುತ್ತಿರುವುದು ಹೈಕೋರ್ಟ್‌ ಆದೇಶದಂತೆ. ಹೀಗಿರುವಾಗ ಸರ್ಕಾರ ವಿಳಂಬ ಮಾಡುವುದು ಯಾಕೆ?. ಆದಷ್ಟು ಬೇಗ ಎಲ್ಲ 27 ಅಭ್ಯರ್ಥಿಗಳಿಗೆ ಹುದ್ದೆಗಳನ್ನು ನೀಡಿ ಎಂದು ತಾಕೀತು ಮಾಡಿತು.

ಇದೇ ವೇಳೆ ಪರಿಷ್ಕೃತ ಪಟ್ಟಿ ಪ್ರಕಾರ 140 ಮಂದಿಗೆ ಹಿಂಬಡ್ತಿ-ಮುಂಬಡ್ತಿ ಕಲ್ಪಿಸುವ ವಿಚಾರದ ಬಗ್ಗೆ ಸರ್ಕಾರದ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿತು. ಆಗ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪ್ರತಿಕ್ರಿಯಿಸಿ 140 ಮಂದಿಗೆ ಅಭಿಪ್ರಾಯ ಕೇಳಿ ನೋಟಿಸ್‌ ನೀಡಲಾಗಿದೆ ಎಂದರು. ಇದಕ್ಕೆ ಸಿಟ್ಟಾದ ನ್ಯಾಯಪೀಠ, ಕೋರ್ಟ್‌ ಆದೇಶ ಪಾಲನೆ ಮಾಡಬೇಕಿರುವಾಗ ಅಭಿಪ್ರಾಯದ ಅವಶ್ಯಕತೆ ಏನು? ಎಂದು ತರಾಟೆಗೆ ತೆಗೆದುಕೊಂಡಿತು.

Advertisement

ಮಾನವೀಯತೆ ದೃಷ್ಟಿಯಿಂದ ನೋಟಿಸ್‌ ನೀಡಲಾಗಿದ್ದು, ಹಿಂಬಡ್ತಿ-ಮುಂಬಡ್ತಿ ಜಾರಿಗೆ ಒಂದಿಷ್ಟು ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಕೋರಿದರು.
ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಏಪ್ರಿಲ್‌ 15ರೊಳಗೆ ಹಿಂಬಡ್ತಿ-ಮುಂಬಡ್ತಿ ಆದೇಶ ಕಾರ್ಯಾಗತಗೊಳಿಸಿ ಎಂದು ಗಡುವು ನೀಡಿ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next