ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈನ ವಿಶೇಷ ಟಾಡಾ ಕೋರ್ಟ್ ಗುರುವಾರ ತಾಹಿರ್ ಮರ್ಜೆಂಟ್ ಮತ್ತು ಫಿರೋಜ್ ಖಾನ್ ಗೆ ಮರಣದಂಡನೆ ಹಾಗೂ ಖರೀಮುಲ್ಲಾ ಖಾನ್ ಹಾಗೂ ಗ್ಯಾಂಗ್ ಸ್ಟರ್ ಅಬು ಸಲೇಂಗೆ ಜೀವಾವಧಿ, ರಿಯಾಜ್ ಅಹ್ಮದ್ ಸಿದ್ದಿಖಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಟಾಡಾ ಕಾಯ್ದೆಯನ್ವಯ ಕೊಲೆ, ಅಪರಾಧ ಸಂಚಿನಡಿ ಕೋರ್ಟ್ ಖರೀಮುಲ್ಲಾ ಖಾನ್ ಹಾಗೂ ಅಬು ಸಲೇಂಗೆ ಜೀವಾವಧಿ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಆರು ಮಂದಿಯಲ್ಲಿ ಐವರನ್ನು ದೋಷಿ ಎಂದು ಜೂನ್ ತಿಂಗಳಲ್ಲಿ ತೀರ್ಪು ನೀಡಿದ್ದು, ಇಂದು ವಿಶೇಷ ಟಾಡಾ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ದೋಷಿ ಎಂಬ ತೀರ್ಪು ಹೊರಬಿದ್ದ ಬಳಿಕ ಆರೋಪಿ ಮುಸ್ತಫಾ ದೊಸ್ಸಾ ಸಾವನ್ನಪ್ಪಿದ್ದ.
ಟಾಡಾ ನ್ಯಾಯಾಲಯದ ಕಾನೂನಿನ ಪ್ರಕಾರ, ಜೀವಾವಧಿ ಶಿಕ್ಷೆ ಅಂದರೆ ಜೀವಿತಾವಧಿಯ ಕೊನೆಯವರೆಗೂ ಜೈಲುಶಿಕ್ಷೆ ಅನುಭವಿಸಬೇಕು. ಏತನ್ಮಧ್ಯೆ ಗಡಿಪಾರು ಕಾಯ್ದೆಯನ್ವಯ ಗರಿಷ್ಠ 25 ವರ್ಷ ಜೈಲುಶಿಕ್ಷೆ ನೀಡಬಹುದಾಗಿದೆ. ಇದೀಗ ಭಾರತ ಸರ್ಕಾರ ಅಬುಸಲೇಂನ ನಿರ್ಧಾರ ಕೈಗೊಳ್ಳಬೇಕಾಗಿದೆ. ಖರೀಮುಲ್ಲಾ ಖಾನ್ 25ವರ್ಷಗಳ ನಂತರ ಬಿಡುಗಡೆಯಾಗಬಹುದು ಅಥವಾ ಶಿಕ್ಷೆ ಮುಂದುವರಿಯಲುಬಹುದಾಗಿದೆ ಎಂದು ವರದಿ ತಿಳಿಸಿದೆ.
Related Articles
1993ರಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈಯ 12 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 257 ಮಂದಿ ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸ್ಫೋಟದ ನಂತರ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆಮೊನ್ ಮತ್ತೊಂದು ಮುಖವಾಡ ಜಗತ್ತಿಗೆ ಪರಿಚಯವಾಗಿತ್ತು. ಬಳಿಕ ದಾವೂದ್ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿದ್ದಾನೆ.