ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಂಡ ನಂತರ ಗ್ಯಾಂಗ್ ಸ್ಟರ್ ಅಬು ಸಲೇಂನನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಪೋರ್ಚುಗಲ್ ಸರ್ಕಾರಕ್ಕೆ ನೀಡಿದ ಗಡಿಪಾರು ಕರಾರಿಗೆ ಬದ್ಧವಾಗಿರಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ (ಜುಲೈ 11) ಆದೇಶ ನೀಡಿದೆ.
ಇದನ್ನೂ ಓದಿ:ನ್ಯಾಯಾಂಗ ನಿಂದನೆ ಕೇಸ್:ಉದ್ಯಮಿ ಮಲ್ಯಗೆ 4 ತಿಂಗಳು ಜೈಲುಶಿಕ್ಷೆ, 2 ಸಾವಿರ ರೂ. ದಂಡ:ಸುಪ್ರೀಂ
2002ರಲ್ಲಿ ಪೋರ್ಚುಗಲ್ ನಿಂದ ಭಾರತಕ್ಕೆ ಹಸ್ತಾಂತರಿಸುವ ವೇಳೆ ಅಬು ಸಲೇಂಗೆ ನೀಡುವ ಶಿಕ್ಷೆ 25 ವರ್ಷಕ್ಕಿಂತ ಹೆಚ್ಚು ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು ಎಂದು ವರದಿ ತಿಳಿಸಿದೆ.
ಗ್ಯಾಂಗ್ ಸ್ಟರ್ ಅಬುಸಲೇಂ ಶಿಕ್ಷೆಯ ವಿಚಾರದಲ್ಲಿ ದೇಶದ ರಾಷ್ಟ್ರಪತಿ ಸಂವಿಧಾನದ 72ನೇ ಪರಿಚ್ಚೇದ ಹಾಗೂ ರಾಷ್ಟ್ರೀಯ ಬದ್ಧತೆಯನ್ನು ಪೂರ್ಣಗೊಳಿಸಲು ಅಧಿಕಾರವನ್ನು ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರ ಸಲಹೆ ನೀಡಲು ಬದ್ಧವಾಗಿರಬೇಕು ಎಂದು ಸುಪ್ರೀಂಕೋರ್ಟ್ ಪೀಠದ ಜಸ್ಟೀಸ್ ಎಸ್.ಕೆ.ಕೌಲ್ ಮತ್ತು ಜಸ್ಟೀಸ್ ಎಂಎಂ ಸುಂದರೇಶ್ ನೇತೃತ್ವದ ಪೀಠ ಹೇಳಿದೆ.
1995ರಲ್ಲಿ ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಅವರನ್ನು ಜುಹೂ ಬಂಗ್ಲೆ ಸಮೀಪ ಸಲೇಂ ಮತ್ತು ಆತನ ಡ್ರೈವರ್ ಮೆಹಂದಿ ಹಸನ್ ಗುಂಡಿಟ್ಟು ಹತ್ಯೆಗೈದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಫೆಬ್ರುವರಿ 25ರಂದು ವಿಶೇಷ ಟಾಡಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಅಬು ಸಲೇಂ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ದೋಷಿಯಾಗಿದ್ದು, ದೀರ್ಘಕಾಲದ ಕಾನೂನು ಸಮರದ ನಂತರ 2005ರ ನವೆಂಬರ್ 11ರಂದು ಸಲೇಂನನ್ನು ಪೋರ್ಚುಗಲ್ ಭಾರತಕ್ಕೆ ಗಡಿಪಾರು ಮಾಡಿತ್ತು.