ಹೊಸದಿಲ್ಲಿ : 1987ರಲ್ಲಿ ಉತ್ತರ ಪ್ರದೇಶದ ಹಾಶೀಮ್‌ಪುರದಲ್ಲಿ ಅಲ್ಪ ಸಂಖ್ಯಾತ ಸಮುದಾಯದ 42 ಮಂದಿಯನ್ನು ಕೊಂದ ಅಪರಾಧಕ್ಕಾಗಿ ದಿಲ್ಲಿ ಹೈಕೋರ್ಟ್ ಇಂದು ಬುಧವಾರ 16 ಪೊಲೀಸರಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿತು.
ವಿಚಾರಣಾಧೀನ ನ್ಯಾಯಾಲಯ ಈ ಮೊದಲು ಈ 16 ಮಂದಿ ಪೊಲೀಸರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ನ್ಯಾಯಾಧೀಶರಾದ ಎಸ್ ಮುರಲೀಧರ ಮತ್ತು ವಿನೋದ್ ಗೋಯಲ್ ಅವರನ್ನು ಒಳಗೊಂಡ ದಿಲ್ಲಿ ಹೈಕೋರ್ಟ್ ಪೀಠ ರದ್ದು ಮಾಡಿತು.
ಹಾಶೀಮ್‌ಪುರ ಹತ್ಯಾಕಾಂಡಕ್ಕೆ ಸಂಬಂಧಿಸಿ ಕೊಲೆ, ಅಪಹರಣ, ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಅಪರಾಧಕ್ಕಾಗಿ ದಿಲ್ಲಿ ಹೈಕೋರ್ಟ್ 16 ಮಂದಿ ಮಾಜಿ ಪ್ರಾಂತೀಯ ಸಶಸ್ತ್ರ ದಳದ (ಪಿಎಸಿ) ಸಿಬಂದಿಗಳಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿತು.
ಹಾಶೀಮ್‌ಪುರ ಹತ್ಯಾಕಾಂಡವು ನಿರಸ್ತ್ರ ಮತ್ತು ಆತ್ಮರಕ್ಷಣೆ ಮಾಡಿಕೊಳ್ಳಲಾಗದ ಜನರನ್ನು ಗುರಿ ಇರಿಸಿ ನಡೆಸಲಾದ ಹತ್ಯೆಯಾಗಿದೆ ಎಂದು ನ್ಯಾಯಾಲಯ ಹೇಳಿತು.
ಕೊಲೆ ಮತ್ತು ಇತರ ಬಗೆಯ ಪಾತಕ ಕೃತ್ಯಗಳನ್ನು ನಡೆಸಿದ ಆರೋಪ ಹೊತ್ತ 16 ಮಂದಿ ಪೊಲೀಸರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮುಂದೆ ಹಲವಾರು ಅರ್ಜಿಗಳು ವಿಚಾರಣೆಗೆ ಬಂದಿದ್ದು ಇದೀಗ ದಿಲ್ಲಿ ಹೈಕೋರ್ಟ್ ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ನೀಡುವ ಮೂಲಕ ನ್ಯಾಯದಾನ ಮಾಡಿದಂತಾಗಿದೆ.