ನವದೆಹಲಿ: ಮಾಜೀ ಪ್ರಧಾನ ಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶ್ರೀಮತಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ ಕಾಣಿಸಿಕೊಂಡಿದ್ದ ಸಿಖ್ ದಂಗೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ.
1984ರ ಸಿಖ್ ದಂಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಕಮಲನಾಥ್ ಅವರು ಇದೀಗ ವಿಶೇಷ ತನಿಖಾ ತಂಡದಿಂದ ಹೊಸ ವಿಚಾರಣೆಯಯನ್ನು ಎದುರಿಸುವ ಸಂಕಷ್ಟದಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಕಮಲನಾಥ್ ವಿರುದ್ಧದ ಪ್ರಕರಣವನ್ನು ಮತ್ತೆ ತೆರೆದಿದ್ದು ವಿಚಾರಣೆಯ ಸಂದರ್ಭದಲ್ಲಿ ಕಮಲನಾಥ್ ವಿರುದ್ಧದ ಹೊಸ ಸಾಕ್ಷಿಗಳನ್ನು ಅದು ಪರಿಗಣಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
‘ಅಕಾಲಿ ದಳಕ್ಕೆ ಇದೊಂದು ದೊಡ್ಡ ಗೆಲುವಾಗಿದೆ. 1984ರ ಸಿಖ್ ದಂಗೆಯಲ್ಲಿನ ತನ್ನ ಪಾತ್ರಕ್ಕಾಗಿ ಕಮಲನಾಥ್ ವಿರುದ್ಧ ಎಸ್.ಐ.ಟಿ. ಹೊಸ ಪ್ರಕರಣ ದಾಖಲಿಸಿಕೊಂಡಿದೆ’ ಎಂದು ಅಕಾಲಿ ದಳ ನಾಯಕ ಮಜಿಂದರ್ ಸಿರ್ಸಾ ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಕಮಲನಾಥ್ ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಸಂಖ್ಯೆ 601/84 ಅನ್ನು ಮತ್ತೆ ತೆರೆಯಬೇಕು ಹಾಗೂ ಹೊಸ ಸಾಕ್ಷಿಗಳನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಸಿರ್ಸಾ ಅವರು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಕಳೆದ ವರ್ಷವಷ್ಟೇ ಮನವಿ ಸಲ್ಲಿಸಿದ್ದರು.
ಕಮಲನಾಥ್ ವಿರುದ್ಧ ಸಾಕ್ಷಿ ಹೆಳಲು ಇಬ್ಬರು ಸಾಕ್ಷೀದಾರರು ಸಿದ್ಧರಿದ್ದಾರೆ ಆದರೆ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಮಜಿಂದರ್ ಸಿರ್ಸಾ ಅವರು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿರುವ ರಕಾಬ್ಗನ್ ಗುರುದ್ವಾರದ ಹೊರಗಡೆ ಸಮಭವಿಸಿದ್ದ ದಂಗೆಯಲ್ಲಿ ಕಮಲನಾಥ್ ಭಾಗಿಯಾಗಿದ್ದರು ಎಂದು ಶಿರೋಮಣಿ ಅಕಾಲಿದಳ ಆರೋಪಿಸುತ್ತಿದೆ.
ಸದ್ಯ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿರುವ ಕಮಲನಾಥ್ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಆಗಿರುವ ಸೋನಿಯಾ ಗಾಂಧಿ ಅವರು ತಕ್ಷಣವೇ ಪಡೆದುಕೊಳ್ಳಬೇಕು ಎಂದು ಸಿರ್ಸಾ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.