ಹೊಸದಿಲ್ಲಿ: 1984ರ ಸಿಕ್ಖ್ ವಿರೋಧಿ ದಂಗೆಯ ಬಗ್ಗೆ ‘ಆಗಿದ್ದಾಯ್ತು, ಏನೀಗ’ (ಹುವಾ ತೋ ಹುವಾ) ಎಂದು ಉಡಾಫೆಯ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಎಲ್ಲ ದಿಕ್ಕುಗಳಿಂದಲೂ ಬಿಸಿ ತಟ್ಟಲಾರಂಭಿಸಿದೆ. ಒಂದೆಡೆ, ಬಿಜೆಪಿ, ಅಕಾಲಿದಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಪಿತ್ರೋಡಾ ವಿರುದ್ಧ ಮುಗಿಬಿದ್ದಿದ್ದು, ದಿಲ್ಲಿಯಲ್ಲಿ ದೂರು ಕೂಡ ದಾಖಲಾಗಿದೆ. ಲೋಕಸಭೆ ಚುನಾವಣೆಯ ವೇಳೆ ಹಿರಿಯ ನಾಯಕ ನೀಡಿರುವ ಈ ಹೇಳಿಕೆಯು ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಪಿತ್ರೋಡಾ ಹೇಳಿಕೆಯನ್ನೇ ಕಾಂಗ್ರೆಸ್ ವಿರುದ್ಧದ ಅಸ್ತ್ರವನ್ನಾಗಿ ಹರಿಯಾಣದ ಚುನಾವಣಾ ರ್ಯಾಲಿಯಲ್ಲಿ ಬಳಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ಕಾಂಗ್ರೆಸ್‌ನ ನಡವಳಿಕೆ ಮತ್ತು ಮನಸ್ಥಿತಿಯನ್ನು ತೋರಿದೆ’ ಎಂದಿದ್ದಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಈ ದೇಶದಲ್ಲಿ ಹೇಗೆ ಆಡಳಿತ ನಡೆಸಿತು, ಅವರ ಮನಸ್ಸು ಹೇಗೆ ಕೆಲಸ ಮಾಡುತ್ತದೆ, ಅವರಲ್ಲಿ ಎಂಥಾ ಅಹಂಕಾರ ತುಂಬಿದೆ… ಎಂಬ ಎಲ್ಲ ಅಂಶಗಳೂ ಪಿತ್ರೋಡಾ ಹೇಳಿಕೆಯಲ್ಲಿ ಬಹಿರಂಗವಾಗಿದೆ. ಹುವಾ ತೋ ಹುವಾ ಎಂಬ ಹೇಳಿಕೆ ನೀಡಿರುವ ಈ ನಾಯಕನು, ಗಾಂಧಿ ಕುಟುಂಬದ ಆಪ್ತ. ಅಷ್ಟೇ ಅಲ್ಲ, ರಾಜೀವ್ ಗಾಂಧಿ ಅವರ ಆತ್ಮೀಯ ಸ್ನೇಹಿತ ಮತ್ತು ಕಾಂಗ್ರೆಸ್‌ನ ನಾಮ್‌ಧಾರ್ ಅಧ್ಯಕ್ಷನ ಗುರು ಕೂಡ ಹೌದು. ಕಾಂಗ್ರೆಸ್‌ನವರಿಗೆ ಜೀವದ ಬೆಲೆ ಗೊತ್ತಿಲ್ಲ ಎಂದೂ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ.
ಕ್ಷಮೆಗೆ ಪಟ್ಟು: ಪಿತ್ರೋಡಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಈ ಕೂಡಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅಷ್ಟೊಂದು ಸಿಕ್ಖರ ಹತ್ಯೆಯಾದರೂ, ಕಾಂಗ್ರೆಸ್‌ಗೆ ಅದರ ಬಗ್ಗೆ ಪಶ್ಚಾತ್ತಾಪವಿಲ್ಲ ಎಂಬುದು ಪಿತ್ರೋಡಾ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈಗ ರಾಹುಲ್ ಗಾಂಧಿ ಅವರು ತಮ್ಮ ‘ಗುರು’ವನ್ನು ವಜಾ ಮಾಡುತ್ತಾರಾ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ. ಪಿತ್ರೋಡಾ ಹೇಳಿಕೆಯು ಬೇಜವಾಬ್ದಾರಿಯಿಂದ ಕೂಡಿದ್ದು, ಸೋನಿಯಾ ಮತ್ತು ರಾಹುಲ್ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಜಾವಡೇಕರ್ ಒತ್ತಾಯಿಸಿದ್ದಾರೆ. ಇನ್ನು, ಪಿತ್ರೋಡಾ ಅವರು ಸಿಕ್ಖರಿಗೆ ಗಾಯದ ಮೇಲೆ ಉಪ್ಪು ಸವರಿದ್ದಾರೆ ಎಂದು ಕೇಂದ್ರ ಸಚಿವ ನಖ್ವೀ ಆರೋಪಿಸಿದ್ದಾರೆ.
ಇದೇ ವೇಳೆ ಅಕಾಲಿ ದಳದ ಸುಖ್‌ಬೀರ್ ಸಿಂಗ್ ಬಾದಲ್ ಅವರೂ ಪಿತ್ರೋಡಾ ವಿರುದ್ಧ ಕಿಡಿಕಾರಿದ್ದಾರೆ. ‘ಇಂಥ ಹೇಳಿಕೆ ಕೇಳಿಯೂ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ಇನ್ನೂ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ, ರಾಜೀನಾಮೆ ನೀಡುತ್ತಾರಾ’ ಎಂದು ಬಾದಲ್ ಪ್ರಶ್ನಿಸಿದ್ದಾರೆ.
ಈ ನಡುವೆ, ಬಿಜೆಪಿ ಮತ್ತು ಅಕಾಲಿ ದಳದ ಕಾರ್ಯಕರ್ತರು ಶುಕ್ರವಾರ ದಿಲ್ಲಿ, ಅಮೃತಸರ ಸಹಿತ ಹಲವೆಡೆ ಭಾರೀ ಪ್ರತಿಭಟನೆಯನ್ನು ನಡೆಸಿದ್ದಾರೆ.
ಕೊನೆಗೂ ಕ್ಷಮೆ ಯಾಚನೆ
‘ಆಗಿದ್ದಾಯ್ತು, ಏನೀಗ’ ಎಂಬ ತಮ್ಮ ಮಾತು ಗಳು ತೀವ್ರ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಶುಕ್ರವಾರ ಸಂಜೆ ಕ್ಷಮೆ ಯಾಚಿಸಿದ್ದಾರೆ. ‘ಹಿಂದಿನ ದೆಲ್ಲವನ್ನೂ ಮರೆತು ಮುಂದೆ ಸಾಗೋಣ ಎಂದು ನಾನು ಹೇಳಿದ್ದು. ಬಿಜೆಪಿ ಸರಕಾರ ಏನು ಮಾಡಿದೆ, ಯಾವ ಸಾಧನೆಗೈದಿದೆ ಎಂಬ ಬಗ್ಗೆ ಚರ್ಚೆಯಾಗಲಿ ಎಂಬ ಅರ್ಥದಲ್ಲಿ ಮಾತ ನಾಡಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆದರೂ, ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಪಿತ್ರೋಡಾ ಹೇಳಿದ್ದಾರೆ. ಜತೆಗೆ, ನನಗೆ ಸರಿಯಾಗಿ ಹಿಂದಿ ಬರುವುದಿಲ್ಲ. ‘ಜೋ ಹುವಾ ವೋ ಬುರಾ ಹುವಾ’ (ಏನಾಯಿತೋ, ಅದಾಗಬಾರದಿತ್ತು) ಎಂದು ಹೇಳುವಾಗ ತಪ್ಪಿ ‘ಹುವಾ ತೋ ಹುವಾ’ ಎಂದಿದ್ದೆ ಎಂದೂ ಸ್ಪಷ್ಟಪಡಿಸಿದ್ದಾರೆ.