Advertisement

1982: ಸಹಾಯವೇ ಎಲ್ಲವೂ ಆಗಿದ್ದ ಆ ಕಾಲ…

11:50 PM Sep 22, 2020 | mahesh |

ಉಡುಪಿ: ನಾಲ್ಕು ದಶಕಗಳ ಹಿಂದೆ 1982ರ ಜೂ. 10ರ ರಾತ್ರಿ ಮೇಘಸ್ಫೋಟವಾಗಿ ಉಡುಪಿ ನಗರ ಅಲ್ಲೋಲ ಕಲ್ಲೋಲವಾದಾಗ ಪರಿಹಾರ ಕಾರ್ಯಗಳು ಹೇಗೆ ನಡೆದಿರಬಹುದು? ಆಗ ಮತ್ತು ಈಗ ಸುರಿದ ಮಳೆಯ ಬಿಸಿ ಯಾವ ರೀತಿ ತಟ್ಟಿತು? ಜನರ ವರ್ತನೆಗಳು ಹೇಗಿದ್ದವು ಎಂಬಿತ್ಯಾದಿ ವಿಷಯಗಳು ಸಾರ್ವಜನಿಕರಲ್ಲಿ ಈಗಲೂ ಚರ್ಚೆ ಆಗುತ್ತಿದೆ.

Advertisement

1982ರಲ್ಲಿ ನೆರೆ ಬಂದಾಗ ಚಂದ್ರೇಶ್ವರ ದೇವಸ್ಥಾನ ಮುಳುಗಿ ರಥಬೀದಿಯಲ್ಲಿ ನೀರು ಮೇಲೆ ಬಂದಿತ್ತು. ಆಗ ಜನರು ಹರಿಯುವ ನೀರಿಗೆ ಹಣತೆಯಲ್ಲಿ ದೀಪ ಹಚ್ಚಿ ಬಿಟ್ಟಿದ್ದರು. ಇದೇಕೆಂದರೆ ದೇವರಿಗೆ ಸಲ್ಲಿಸುವ ಪ್ರಾರ್ಥನೆ, ನೆರೆ ಇಳಿಯಲಿ ಎಂದು. ಈ ಬಾರಿ ರಥಬೀದಿಯಲ್ಲಿ ನೀರು ಉಕ್ಕೇರಲಿಲ್ಲ. ಮೇಘಸ್ಫೋಟವಾದಾಗ ಕಾಣಿಯೂರು ಮಠದ ಶ್ರೀ ವಿದ್ಯಾವಾರಿನಿಧಿತೀರ್ಥರ ಪರ್ಯಾಯ ನಡೆಯುತ್ತಿತ್ತು. ಬೈಲಕೆರೆಯವರ ಸಂತ್ರಸ್ತರೆಲ್ಲರನ್ನೂ ಕರೆತಂದು ಬಿರ್ಲಾ ಛತ್ರದಲ್ಲಿ ಬಿಟ್ಟ ಬಳಿಕ ಸ್ವಾಮೀಜಿಯವರಿಗೆ ತಿಳಿಸಲಾಯಿತು. 200-300 ಜನರಿದ್ದರು. ಊಟವನ್ನು ಕಾಣಿಯೂರು ಮಠದಿಂದ ಮತ್ತು ಕಾಫಿ, ಉಪಾಹಾರವನ್ನು ಪೇಜಾವರ ಮಠದಿಂದ ಒದಗಿಸಲಾಯಿತು.

ಆಗ ಯುವ ಕಾಂಗ್ರೆಸ್‌, ಆರೆಸ್ಸೆಸ್‌ ಕಾರ್ಯಕರ್ತರು ಮನೆಗಳ ದುರಸ್ತಿ, ನೆರವು, ಪರಿಹಾರದ ಕಾರ್ಯ ನಡೆಸಿದ್ದರು. ಎಲ್ಲೆಲ್ಲಿ ಹಾನಿಯಾಗಿದೆ ಎಂಬುದನ್ನು ತಿಳಿಯಲು ಡಾ|ವಿ.ಎಸ್‌.ಆಚಾರ್ಯ ಮತ್ತು ಯು.ಆರ್‌. ಸಭಾಪತಿಯವರು ಒಟ್ಟಿಗೆ ನನ್ನ ಆಟೋ ರಿಕ್ಷಾದಲ್ಲಿಯೇ ಸಂಚರಿಸಿದ್ದರು ಎಂಬುದನ್ನು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ನರಸಿಂಹಮೂರ್ತಿ ನೆನಪಿಸಿಕೊಳ್ಳುತ್ತಾರೆ.

ಸುಮಾರು 3 ತಿಂಗಳು ಆದಿ ಉಡುಪಿ ಎಪಿಎಂಸಿ ಪ್ರಾಂಗಣದಲ್ಲಿ ಸಂತ್ರಸ್ತರ ಶಿಬಿರವನ್ನು ಸಂಸದರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಮುತುವರ್ಜಿಯಿಂದ ಏರ್ಪಡಿಸಲಾಯಿತು. ದಿನೇಶ್‌ ಪುತ್ರನ್‌, ಮಂಜುನಾಥ ಉದ್ಯಾವರ ಮೊದಲಾದವರು ಶ್ರಮಿಸಿದ್ದರು.

ಆರೆಸ್ಸೆಸ್‌ ಸಂಚಾಲಿತ ಪರಿಹಾರ ಸಮಿತಿಯಿಂದ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವಾಗ ಮೂವರು ಮುಸ್ಲಿಮರಿಗೂ ಇಬ್ಬರು ಕ್ರೈಸ್ತ ಸಮುದಾಯವರಿಗೂ ಕೊಡಲಾಗಿತ್ತು. ಆಗ ನಾವು ಕೆಲವು ಮಂದಿ ಸಿಂಡಿಕೇಟ್‌ ಬ್ಯಾಂಕ್‌ ಸಿಬಂದಿಗೆ ಪರಿಹಾರ ಕೆಲಸ ಮಾಡಲು ಬ್ಯಾಂಕ್‌ ಅಧ್ಯಕ್ಷರಾಗಿದ್ದ ರಘುಪತಿಯವರು ಒಒಡಿ ರಜೆಯನ್ನು ಮಂಜೂರು ಮಾಡಿದ್ದರು ಎನ್ನುತ್ತಾರೆ ಸಿಬಂದಿಯಾಗಿದ್ದ ದಿನಕರ ಪಂಡಿತ್‌. ಪರಿಹಾರ ಕಾರ್ಯ ಮಾಡುವಾಗ, ಸಂತ್ರಸ್ತರಿಗೆ ಸಹಾಯಹಸ್ತ ನೀಡುವಾಗ ಪಕ್ಷ, ಜಾತಿ-ಮತ ಮರೆತು ಎಲ್ಲರೂ ಒಟ್ಟಾಗಿದ್ದರು. ಸಹಾಯ ಒದಗಿಸುವುದೇ ಎಲ್ಲರ ಧ್ಯೇಯ ವಾಗಿತ್ತು ಎಂಬುದನ್ನು ನರಸಿಂಹಮೂರ್ತಿಯವರೂ, ದಿನಕರ ಪಂಡಿತರೂ ಉಲ್ಲೇಖೀಸುತ್ತಾರೆ.

Advertisement

ಈ ಬಾರಿ ಹಠಾತ್ತನೆ ದಾಳಿ, ಆಗ ಎಚ್ಚರವಿತ್ತು!
ಈ ಬಾರಿ ರವಿವಾರ ಮುಂಜಾವ ಬೈಲಕೆರೆ ಸುತ್ತಮುತ್ತ ನಿವಾಸಿಗಳು ನಿತ್ಯದಂತೆ ಭರ್ಜರಿ ನಿದ್ರೆಯಲ್ಲಿದ್ದರು. ಮನೆಗಳಲ್ಲಿ ಮಲಗಿದ್ದವರಿಗೆ ಚಾಪೆ ಒದ್ದೆಯಾದಾಗಲೇ ಎಚ್ಚರವಾದದ್ದು. ಎದ್ದು ನೋಡುವಾಗ ಮನೆಯೊಳಗೆ ನೀರು ನುಗ್ಗಿತ್ತು. ಬಹುತೇಕ ತಗ್ಗುಪ್ರದೇಶದವರಿಗೆ ಇಂತಹುದೇ ಅನುಭವವಾಗಿತ್ತು. 1982ರಲ್ಲಿ ಮುಸ್ಸಂಜೆಯಿಂದ ಸುರಿಯುತ್ತಿದ್ದ ಮಳೆಯ ನೀರು ಮಧ್ಯರಾತ್ರಿ ಏರುತ್ತಲೇ ಬಂದಿತ್ತು. ಆಗ ಆವರಣಗೋಡೆಗಳು ಇಲ್ಲದ ಕಾರಣ ನೆರೆನೀರು ಏರುವುದು ತೋರುತ್ತಿತ್ತು. ಉಪ್ಪರಿಗೆ ಮೇಲೆ ಎಷ್ಟೋ ಜನರು ಹೋಗಿ ಕುಳಿತುಕೊಂಡಿದ್ದರು. ಬೈಲಕೆರೆ ಪರಿಸರದಿಂದ ಬೊಬ್ಬೆ ಕೇಳಿಬರುತ್ತಿತ್ತು. ಆಗಲೂ ಮಠಗಳಲ್ಲಿದ್ದ ದೋಣಿಗಳು ಉಪಯೋಗವಾಗಿದ್ದವು ಎನ್ನುತ್ತಾರೆ ಬಡಗುಪೇಟೆಯ ನಿವಾಸಿ ವಾದಿರಾಜ ರಾವ್‌.

Advertisement

Udayavani is now on Telegram. Click here to join our channel and stay updated with the latest news.

Next