Advertisement

ತವರಿಗೆ ಮರಳಲು ನೆರವು ನೀಡಿ: ದಿವಾನ್‌

11:05 PM Apr 09, 2020 | Sriram |

ಹೊಸದಿಲ್ಲಿ: ಪ್ರಯಾಣ ನಿರ್ಬಂಧದಿಂದ ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿರುವ ಹಾಕಿ ಒಲಿಂಪಿಯನ್‌ ಮತ್ತು 1975ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ದ ಅಶೋಕ್‌ ದಿವಾನ್‌ ಅವರನ್ನು ಸ್ವದೇಶಕ್ಕೆ ಕರೆದುಕೊಂಡು ಬರಲು ಈಗ ಕ್ರೀಡಾ ಸಚಿವಾಲಯ ಕಾರ್ಯೋನ್ಮುಖವಾಗಿದೆ.

Advertisement

ಕೋವಿಡ್ 19 ವೈರಸ್‌ ವ್ಯಾಪಕವಾಗಿ ಹರಡು ತ್ತಿರುವುದರಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೋಷಿಸಿವೆ ಮಾತ್ರವಲ್ಲದೇ ಗಡಿ, ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ತವರಿಗೆ ಬರಲು ದಿವಾನ್‌ ಅವರಿಗೆ ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ನೆರವನ್ನು ಅವರು ಯಾಚಿಸಿದ್ದಾರೆ.

65ರ ಹರೆಯದ ದಿವಾನ್‌ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿರುವುದು ಆಘಾತಕ್ಕೆ ಕಾರಣ ವಾಗಿದೆ. ಹೀಗಾಗಿ ಭಾರತೀಯ ಒಲಿಂಪಿಕ್‌ ಅಸೋ ಸಿಯೇಶನ್‌ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ಅವರಿಗೆ ಕರೆ ಮಾಡಿರುವ ಅವರು ಈ ಸಂಬಂಧ ಉನ್ನತ ಅಧಿಕಾರಿಗಳ ಜತೆ ಮಾತನಾಡಿ ಸಹಾಯಕ್ಕೆ ಮನವಿ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಈ ಸಂಬಂಧ ಪತ್ರ ಸಿಕ್ಕಿರುವುದನ್ನು ಸಚಿವಾಲದ ಮೂಲಗಳು ದೃಢಪಡಿಸಿವೆ ಮತ್ತು ಈ ಪತ್ರವನ್ನು ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಹೇಳಿವೆ.

ಬಾತ್ರಾಗೆ ದಿವಾನ್‌ ಪತ್ರ
ಧ್ಯಾನ್‌ಚಂದರ್‌ ಪ್ರಶಸ್ತಿ ಪುರಸ್ಕೃತರೂ ಆಗಿರುವ ದಿವಾನ್‌ ಸಹಾಯಕ್ಕಾಗಿ ಮೊದಲು ಬಾತ್ರಾ ಅವರನ್ನು ಸಂಪರ್ಕಿಸಿದ್ದರು. ನಾನು ಅಮೆರಿಕದಲ್ಲಿ ಸಿಕ್ಕಿಹಾಕಿಕೊಂಡಿದೇನೆ. ನನಗೆ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಕಳೆದ ವಾರ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಯಿತು. ಇತ್ತೀಚೆಗಿನ ದಿನಗಳಲ್ಲಿ ನನ್ನ ಆರೋಗ್ಯ ಹದೆಗೆಡುತ್ತಿದೆ ಮಾತ್ರವಲ್ಲದೇ ಇಲ್ಲಿ ಇನ್ಶೂರೆನ್ಸ್‌ ಇಲ್ಲದ ಕಾರಣ ವೈದ್ಯಕೀಯ ಖರ್ಚು ದುಬಾರಿಯಾಗಿರುತ್ತದೆ ಎಂದವರು ಬಾತ್ರಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

Advertisement

ಅಸಹಾಯಕರಾಗಿದ್ದೇವೆ: ದಿವಾನ್‌ ಪುತ್ರಿ ಅರುಶಿ
ಪುತ್ರನ ಮನೆಯಲ್ಲಿ ಕೆಲವು ಸಮಯ ಕಳೆಯುವ ಉದ್ದೇಶದಿಂದ ತಂದೆಯವರು ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದರು. ಆತಂಕ ಮತ್ತು ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿದೆ ಎಂದರು. ಇದೀಗ ಕೋವಿಡ್ 19ದಿಂದಾಗಿ ಎಲ್ಲೆಡೆ ಲಾಕ್‌ಡೌನ್‌ ಇರುವುದರಿಂದ ನಾವು ಅಸಹಾಯಕರಾಗಿದ್ದೇವೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸಹೋದರ ಮತ್ತು ತಂದೆ ಇಬ್ಬರೇ ಅಲ್ಲಿದ್ದಾರೆ. ಅಮೆರಿಕದಲ್ಲಿ ಸದ್ಯದ ಸ್ಥಿತಿ ಅತ್ಯಂತ ಕಠಿನವಾಗಿದೆ. ಹೀಗಾಗಿ ಬಾತ್ರಾ ಅವರನ್ನು ಸಂಪರ್ಕಿಸಿದ್ದೇವೆ. ಸರಕಾರ ಈ ನಿಟ್ಟಿನಲ್ಲಿ ನೆರವು ನೀಡುವ ವಿಶ್ವಾಸವಿದೆ ಎಂದು ದಿವಾನ್‌ ಅವರ ಪುತ್ರಿ ಅರುಶಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next