ಮುಂಬೈ: 1970ರ ಪ್ರಕರಣವೊಂದರ ತೀರ್ಪನ್ನು ಪ್ರಶ್ನಿಸಿ ಇರಾನ್ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ವಜಾ ಮಾಡಿದೆ.
ರೈಲು ಬಂಡಿ ಮಾರಾಟಕ್ಕೆ ಸಂಬಂಧಿಸಿದ ವಿವಾದದಲ್ಲಿ ಭಾರತೀಯ ಕಂಪನಿಗೆ 35 ಲಕ್ಷ ಡಾಲರ್ ಪಾವತಿಸುವಂತೆ ಇರಾನ್ ಸರ್ಕಾರಕ್ಕೆ 2008ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಇರಾನ್ ಸರ್ಕಾರ ಮೇಲ್ಮನವಿ ಸಲ್ಲಿತ್ತು.
ಈ ಅರ್ಜಿಯನ್ನು ವಜಾ ಮಾಡಿರುವ ಉಚ್ಚ ನ್ಯಾಯಾಲಯ, ನಾಲ್ಕು ವಾರಗಳೊಳಗಾಗಿ ಭಾರತದ ಕೆಟಿ ಸ್ಟೀಲ್ಸ್ ಕಂಪನಿಗೆ ದಂಡದ ಮೊತ್ತವನ್ನು ಪಾವತಿಸಬೇಕು ಎಂದು ಸೂಚಿಸಿದೆ. ಅಲ್ಲದೇ, ಹೆಚ್ಚುವರಿಯಾಗಿ 10 ಲಕ್ಷ ರೂ. ದಂಡವನ್ನೂ ವಿಧಿಸಿದೆ.
1970ರ ಮಾ.16ರಂದು ಇರಾನ್‌ಗೆ ರೈಲು ಬಂಡಿಗಳನ್ನು ಪೂರೈಕೆ ಮಾಡುವ ಒಪ್ಪಂದಕ್ಕೆ ಕೆಟಿ ಸ್ಟೀಲ್ಸ್ ಸಹಿ ಹಾಕಿತ್ತು. 1972ರಲ್ಲಿ ಅಂತಾರಾಷ್ಟ್ರೀಯ ತೈಲ ದರದಲ್ಲಿ ಏರಿಕೆಯಾದ ಕಾರಣ, ಸರಕು ಸಾಗಣೆ ವೆಚ್ಚವೂ ಹೆಚ್ಚಳವಾಯಿತು.
306 ರೈಲು ಬಂಡಿಗಳ ಸಾಗಣೆ ವೆಚ್ಚವನ್ನು ಇರಾನ್ ಸರ್ಕಾರ ಪಾವತಿಸುತ್ತಿಲ್ಲ ಎಂದು ಕೆಟಿ ಸ್ಟೀಲ್ಸ್ ದೂರಿತ್ತು. 1996ರಲ್ಲಿ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
2008ರಲ್ಲಿ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್, 35 ಲಕ್ಷ ಡಾಲರ್ ಮೊತ್ತವನ್ನು ಕೆಟಿ ಸ್ಟೀಲ್ಸ್‌ಗೆ ಪಾವತಿಸುವಂತೆ ಇರಾನ್ ಸರ್ಕಾರಕ್ಕೆ ಸೂಚಿಸಿತ್ತು.