Advertisement

ಕುಳಾಯಿ ಜೆಟ್ಟಿಗೆ 196.51 ಕೋ.ರೂ.: ನಳಿನ್‌

04:35 AM Jul 02, 2018 | Team Udayavani |

ಮಂಗಳೂರು: ಕುಳಾಯಿಯಲ್ಲಿ ಸರ್ವಋತು ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 196.51 ಕೋ.ರೂ. ಮಂಜೂರು ಆಗಿದ್ದು ಸದ್ಯದಲ್ಲೇ ಎನ್‌.ಎಂ.ಪಿ.ಟಿ. ಮೂಲಕ ಟೆಂಡರ್‌ ಪ್ರಕ್ರಿಯೆಗಳು ನಡೆಯಲಿವೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ. ನಗರದ ಸರ್ಕಿಟ್‌ ಹೌಸ್‌ ನಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಮಂಗಳೂರಿನ 2ನೇ ಸರ್ವಋತು ಮೀನುಗಾರಿಕಾ ಬಂದರು ಇದಾಗಲಿದೆ. ಸಾಗರ ಮಾಲಾ ಯೋಜನೆಯಲ್ಲಿ ಕೇಂದ್ರ ನೌಕಾಯಾನ ಸಚಿವಾಲಯ, ಕೇಂದ್ರ ಪಶುಸಂಗೋಪನಾ ಇಲಾಖೆ, ಹೈನುಗಾರಿಕೆ ಹಾಗೂ ಮೀನುಗಾರಿಕಾ ಇಲಾಖೆ, ನವಮಂಗಳೂರು ಹಾಗೂ ಕರ್ನಾಟಕ ಸರಕಾರದ ಆರ್ಥಿಕ ಭಾಗೀದಾರಿಕೆಯೊಂದಿಗೆ ಯೋಜನೆ ಅನುಷ್ಠಾನಗೊಳ್ಳಲಿದೆ. ಕುಳಾಯಿಯಲ್ಲಿ ಒಟ್ಟು 10 ಎಕ್ರೆ ಸರಕಾರಿ ಜಮೀನಿನಲ್ಲಿ ಇದು ನಿರ್ಮಾಣವಾಗಲಿದೆ. ಇದಕ್ಕೆ ಯಾವುದೇ ಖಾಸಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಅವರು ವಿವರಿಸಿದರು. ಯೋಜನೆಯಿಂದ‌ ಸಸಿಹಿತ್ಲು , ತೋಕೂರು, ಸುರತ್ಕಲ್‌, ಬೈಕಂಪಾಡಿ, ಪಣಂಬೂರು, ತಣ್ಣೀರುಬಾವಿ ಹಾಗೂ ಚಿತ್ರಾಪುರ ಪ್ರದೇಶಗಳ ಮೀನುಗಾರರಿಗೆ ಪ್ರಯೋಜನವಾಗಲಿದೆ ಎಂದರು. ವರ್ಷದ 12 ತಿಂಗಳು ಈ ಮೀನುಗಾರಿಕಾ ಜೆಟ್ಟಿ ಕಾರ್ಯಾಚರಿಸುತ್ತದೆ ಎಂದರು.

Advertisement

3ನೇ ಕೇಂದ್ರೀಯ ವಿದ್ಯಾಲಯ ಮಂಜೂರು
ಶಿಕ್ಷಣ ಹಬ್‌ ಆಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಗೆ 3ನೇ ಕೇಂದ್ರೀಯ ವಿದ್ಯಾಲಯ ಮಂಜೂರುಗೊಂಡಿದ್ದು ಎನ್‌.ಐ.ಟಿ.ಕೆ ಆವರಣದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಮಂಗಳೂರಿನ ಎಕ್ಕೂರು ಹಾಗೂ ಎನ್‌.ಎಂ.ಪಿ.ಟಿ.ಯಲ್ಲಿ ಈಗಾಗಲೇ ಕೇಂದ್ರೀಯ ವಿದ್ಯಾಲಯಗಳು ಇವೆ. ನನ್ನ ಮನವಿಗೆ ಸ್ಪಂದಿಸಿ ಕೇಂದ್ರ ಮಾನವ ಸಂಪದ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಇನ್ನೊಂದು ಕೇಂದ್ರೀಯ ವಿದ್ಯಾಲಯವನ್ನು ಜಿಲ್ಲೆಗೆ ಮಂಜೂರು ಮಾಡಿದ್ದಾರೆ. ಇದು ಎನ್‌.ಐ.ಟಿ.ಕೆ.ಯ 5 ಎಕ್ರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಕುಲಶೇಖರ -ಕಾರ್ಕಳ ಹೆದ್ದಾರಿ : ಡಿಸೆಂಬರ್‌ನಲ್ಲಿ ಟೆಂಡರ್‌
ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ ಭೂಸ್ವಾಧೀನ ಸಂಬಂಧಪಟ್ಟು ಎಲ್ಲ ಪ್ರಕ್ರಿಯೆಗಳು ಸೆಪ್ಟಂಬರ್‌ನಲ್ಲಿ ಪೂರ್ಣಗೊಳ್ಳಲಿದ್ದು ಡಿಸೆಂಬರ್‌ನಲ್ಲಿ ಟೆಂಡರ್‌ ಕರೆಯಲಾಗುತ್ತಿದೆ. 45 ಮೀಟರ್‌ ಅಗಲಕ್ಕೆ ವಿಸ್ತರಿಸಲ್ಪಡುವ ಯೋಜನೆಯಲ್ಲಿ ಗುರುಪುರ ಹಾಗೂ ಮೂಡಬಿದಿರೆಯಲ್ಲಿ ಎರಡು ಬೈಪಾಸ್‌ ಗಳು ಬರಲಿವೆ. ಗುರುಪುರದಲ್ಲಿ ಈಗಾಗಲೇ 33 ಕೋ.ರೂ. ಮೊತ್ತದಲ್ಲಿ ನಿರ್ಮಾಣವಾಗುವ ಸೇತುವೆಯಲ್ಲದೆ ಹೊಸದಾಗಿ ಇನ್ನೊಂದು ಸೇತುವೆ ನಿರ್ಮಾಣವಾಗಲಿದೆ ಎಂದು ನಳಿನ್‌ ವಿವರಿಸಿದರು.

ಶಾಸಕ ಡಾ| ಭರತ್‌ ಶೆಟ್ಟಿ , ಯೋಜನೆಯ ಸಮನ್ವಯಕಾರ ರಾಮಚಂದರ್‌ ಬೈಕಂಪಾಡಿ, ಕಾರ್ಪೊರೇಟರ್‌ ಗಣೇಶ್‌ ಹೊಸಬೆಟ್ಟು , ಮಿನುಗಾರಿಕಾ ಉಪ ನಿರ್ದೇಶಕ ಮಹೇಶ್‌ ಕುಮಾರ್‌ ಉಪಸ್ಥಿತರಿದ್ದರು. 

600ಕ್ಕೂ ಅಧಿಕ ಬೋಟುಗಳಿಗೆ ಅವಕಾಶ
ಕುಳಾಯಿ ಸರ್ವಋತು ಮೀನುಗಾರಿಕಾ ಜೆಟ್ಟಿಯಲ್ಲಿ 325 ಯಾಂತ್ರಿಕ ಮೀನುಗಾರಿಕಾ ಹಾಗೂ 300 ನಾಡದೋಣಿಗಳಿಗೆ ಅವಕಾಶವಾಗಲಿದೆ. ಸಾಗರಮಾಲಾ ಯೋಜನೆಯಲ್ಲಿ ಕೇಂದ್ರ ನೌಕಾಯಾನ ಸಚಿವಾಲಯ 98.25 ಕೋ.ರೂ. (ಶೇ. 50), ಕೇಂದ್ರ ಪಶುಸಂಗೋಪನಾ, ಹೈನುಗಾರಿಕೆ ಹಾಗೂ ಮೀನುಗಾರಿಕಾ ಇಲಾಖೆ, ನವಮಂಗಳೂರು 88.45 ಕೋ.ರೂ. (ಶೇ. 45) ಹಾಗೂ ಕರ್ನಾಟಕ ಸರಕಾರ 9.53 ಕೋ.ರೂ. (ಶೇ. 5) ಮೊತ್ತವನ್ನು ಭರಿಸಲಿದೆ. ಇದರಲ್ಲಿ 2 ಮೀನು ಹರಾಜು ಕೇಂದ್ರ, ಬಲೆ ಹಾಗೂ ದೋಣಿ ದುರಸ್ತಿ ವಿಭಾಗಗಳು ಬರಲಿವೆ. ಸುಮಾರು 2,500 ಸ್ಥಳೀಯ ಮೀನುಗಾರರಿಗೆ ಹಾಗೂ 2,500 ಮಂದಿಗೆ ಪರೋಕ್ಷ ಉದ್ಯೋಗಗಳನ್ನು ಕಲ್ಪಿಸಲಿದೆ. ಎರಡು ವರ್ಷದೊಳಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್‌ ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next