ಉಡುಪಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 1947 ರಲ್ಲಿ ಉಡುಪಿ ನಗರಾದ್ಯಂತ ಆ ಸಂಭ್ರಮವನ್ನು ಆ. 14ರ ರಾತ್ರಿಯಿಂದ ಮರುದಿನ ರಾತ್ರಿವರೆಗೆ ಆಚರಿಸಲಾಗಿತ್ತು. ಎಲ್ಲ ದೇವಸ್ಥಾನ, ಮಠಗಳಲ್ಲಿ ಆಚರಣೆ ನಡೆದುದೇ ವಿಶೇಷ.
ನಗರದ ವಿವಿಧೆಡೆಯ ಎಲ್ಲ ದೇವಸ್ಥಾನ, ಮಠ, ಮನೆ, ರಸ್ತೆಗಳು ಅಲಂಕೃತವಾಗಿದ್ದವು. ಆ. 14ರ ರಾತ್ರಿ ಎಂ.ವಿ. ಹೆಗ್ಡೆ ರಚಿಸಿದ ‘ಸ್ವರಾಜ್ಯ ವಿಜಯ’ ತಾಳಮದ್ದಲೆಯನ್ನು ಯುವಕ ಮಂಡಲದ ಸದಸ್ಯರು ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲಿನಲ್ಲಿ ಪ್ರಸ್ತುತಪಡಿಸಿದರು. ಅಧ್ಯಕ್ಷತೆಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂ. ವಿಠಲ ಕಾಮತ್ (ಪತ್ರಕರ್ತ ಡಾ| ಎಂ.ವಿ. ಕಾಮತ್ ಅವರ ತಂದೆ) ವಹಿಸಿದ್ದರು.
ಮಧ್ಯರಾತ್ರಿ ರಥಬೀದಿಯಲ್ಲಿ ಸ್ವಾಮೀಜಿ ರಾಷ್ಟ್ರಧ್ವಜ ಅರಳಿಸಿದರು. ಬಾಲಕರ ತರಬೇತಿ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಭಟ್ ಅಧ್ಯಕ್ಷತೆವಹಿಸಿದ್ದರು. ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ’ಕಲಾವೃಂದ’ ಸಾಂಸ್ಕೃತಿಕ ಸಂಸ್ಥೆಯಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.
ಆ. 15ರ ಬೆಳಗ್ಗೆ ಮಠದಿಂದ ಪ್ರಭಾತಪೇರಿ ಹೊರಟು ಅಜ್ಜರಕಾಡು ಗಾಂಧಿ ಮೈದಾನದಲ್ಲಿ ಸಮಾಪನಗೊಂಡಿತು. ಮುನ್ಸೀಫರಾಗಿದ್ದ ಪಾಂಗಾಳ ಮೂಡಲಗಿರಿ ನಾಯಕ್‌ರಾಷ್ಟ್ರಧ್ವಜ ಅರಳಿಸಿದರು. ಹಿರಿಯರಾದ ಡಾ| ಕೆ.ಎಲ್. ಐತಾಳ್ ಡಾ| ಪಾಂಗಾಳ ರಾಘವೇಂದ್ರ ನಾಯಕ್, ಉಡುಪಿ ಪುರಸಭೆಯ ಸ್ಥಾಪಕಾಧ್ಯಕ್ಷ ಆರೂರು ಲಕ್ಷ್ಮೀನಾರಾಯಣ ರಾವ್, ವಿಟuಲ ಕಾಮತ್, ಕೆ.ಕೆ. ಶಾನುಭಾಗ್, ಪಾಂಗಾಳ ಲಕ್ಷ್ಮೀನಾರಾಯಣ ನಾಯಕ್, ಪಾಂಗಾಳ ಮನೋರಮಾ ಬಾಯಿ, ಆಗಿನ ಕಾಂಗ್ರೆಸ್ ಅಧ್ಯಕ್ಷ ಬಾಳ್ಕಟ್ಟಬೀಡು ಕೃಷ್ಣಯ್ಯ ಹೆಗ್ಡೆ ಮತ್ತು ತಹಶೀಲ್ದಾರ್ ಸದಾನಂದ ಪೈ ಪಾಲ್ಗೊಂಡಿದ್ದ ಪ್ರಮುಖರು.
ಸುದ್ದಿಯನ್ನು ಅಂದಿನ ‘ನವಯುಗ’ ಮತ್ತು ‘ರಾಷ್ಟ್ರಬಂಧು’ ವಾರಪತ್ರಿಕೆಗಳು ವರದಿ ಮಾಡಿದವು. ಸೇವಾದಲ ಮತ್ತು ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡಿದರು. ಸಿಹಿತಿಂಡಿ ವಿತರಿಸಲಾಯಿತು.