ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ ಸಸ್ಪೆನ್ಸ್ ಕಂ ಹಾರರ್ ಕಥಾಹಂದರದ “1900′ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. “ಲವ್ ಮಾಕ್ಟೇಲ್’ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ “1900′ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
“ಪದ್ಮಾವತಿ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ರಾಜೇಶ್ ಬಿ. ಮತ್ತು ಉಮೇಶ್ ಕೆ. ಎನ್ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ “1900′ ಸಿನಿಮಾಕ್ಕೆ ರಾಜೇಶ್ ಬಿ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶಿವಪುರ ಎಂಬ ಗ್ರಾಮದಲ್ಲಿ 1900 ರಲ್ಲಿ ಈ ಕಥೆ ಶುರುವಾಗುತ್ತದೆ. ಹಾಗಾಗಿ ಸಿನಿಮಾಕ್ಕೆ “1900′ ಎಂದು ಟೈಟಲ್ ಇಡಲಾಗಿದೆ ಎಂಬುದು ಚಿತ್ರದ ಟೈಟಲ್ ಬಗ್ಗೆ ಚಿತ್ರತಂಡದ ಮಾತು.
“ಅತೀಂದ್ರಿಯ ವಿದ್ಯೆಗಳನ್ನು ಕಲಿತಿರುವ ಹುಂಬನೊಬ್ಬ ತನ್ನ ಹಿತಕ್ಕಾಗಿ ಶಿವಪುರ ಗ್ರಾಮದಲ್ಲಿ ನರಬಲಿ ಕೊಡುತ್ತಿರುತ್ತಾನೆ. ಇದನ್ನು ತಿಳಿದ ಊರಿನ ಜನರು ಆತನನ್ನು ಜೀವಂತ ವಾಗಿ ದಹಿಸಿಬಿಡುತ್ತಾರೆ. ಆ ಸಂದರ್ಭದಲ್ಲಿ ಅವನು ಕೊಡುವ ಶಾಪ ಈಗಿನ ಕಾಲಕ್ಕೂ ಮುಂದುವರೆ ದುಕೊಂಡು ಬಂದಿರುತ್ತದೆ. ಇದನ್ನು ತನಿಖೆ ಮಾಡಲು ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಯೊಬ್ಬರು ನೇಮಕವಾಗುತ್ತಾರೆ. ಅವರು ಶಿವಪುರಕ್ಕೆ ಭೇಟಿ ನೀಡಿದಾಗ ಅಲ್ಲಿ ಏನೇನು ಘಟನೆಗಳು ನಡೆಯುತ್ತವೆ? ಕೊನೆಗೆ ಗ್ರಾಮಸ್ಥರನ್ನು ಶಾಪದಿಂದ ವಿಮೋಚನೆ ಹೊಂದುತ್ತಾರಾ? ಇಲ್ಲವಾ? ಅನ್ನೋದೆ ಸಿನಿಮಾದ ಕಥೆಯ ಎಳೆ’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ವಿವರಣೆ ಕೊಡುತ್ತಾರೆ ನಿರ್ದೇಶಕ ರಾಜೇಶ್ ಬಿ.
ಈ ಹಿಂದೆ ಒಂದಷ್ಟು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಅನುಭವವಿರುವ ಕಿರುತೆರೆ ನಟಿ ಪೂಜಾ ರಮೇಶ್, “1900′ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ವಿ. ಮನೋಹರ್, ಉಮೇಶ್, ಮಿಮಿಕ್ರಿ ಗೋಪಿ, ಮಜಾಭಾರತ್ ಚಂದ್ರಪ್ರಭಾ, ಗುರುದೇವ್, ಮದನ್ ರಾಜ್, ಮೀರಾಶ್ರೀ, ಚೈತನ್ಯ ಶೆಟ್ಟಿ ಮೊದಲಾದವರು “1900′ ಸಿನಿಮಾದ ಇತರ ಪ್ರಮಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“1900′ ಸಿನಿಮಾಕ್ಕೆ ಅರುಣ್ ನಾಗ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನವಿದೆ. ಅಕ್ಟೋಬರ್ ಕೊನೆವಾರದಿಂದ “1900′ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು, ಕನಕಪುರ, ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡವು ಯೋಜನೆ ಹಾಕಿಕೊಂಡಿದೆ.