ಗುಂಡ್ಲುಪೇಟೆ(ಚಾಮರಾಜನಗರ): ಚಿಕನ್ ಊಟ ಸೇವಿಸಿ ವಾಂತಿ, ಬೇಧಿ ಕಾಣಿಸಿಕೊಡ ಹಿನ್ನಲೆ 19 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜು.16ರ ಭಾನುವಾರ ರಾತ್ರಿ ನಡೆದಿದೆ.
ಯಡವನಹಳ್ಳಿ ವಸತಿ ಶಾಲೆಯಲ್ಲಿ ಒಟ್ಟು 280 ವಿದ್ಯಾರ್ಥಿಗಳಿದ್ದು, ಘಟನೆಯಲ್ಲಿ 19 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ಬೇಗೂರಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸದ್ಯ 18 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಓರ್ವ ವಿದ್ಯಾರ್ಥಿಗೆ ವಾಂತಿ ಹೆಚ್ಚಾದ ಹಿನ್ನಲೆ ಮೈಸೂರಿಗೆ ರವಾನಿಸಲಾಗಿದೆ.
ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂದಿನಂತೆ ಭಾನುವಾರ ರಾತ್ರಿ ಚಿಕನ್ ಊಟ ತಯಾರಿಸಲಾಗಿತ್ತು. ಮಕ್ಕಳು ಊಟ ಮಾಡಿದ ನಂತರ ವಾಂತಿ, ಬೇಧಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ನಂತರವಷ್ಟೆ ಗೊತ್ತಾಗಬೇಕಾಗಿದೆ.
ಆಸ್ಪತ್ರೆಗೆ ತಹಶೀಲ್ದಾರ್ ಭೇಟಿ: ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳು ಚಿಕನ್ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ಅರಿತ ತಹಶೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ಬೇಗೂರಿನ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.