ಚೆನ್ನೈ/ಕೊಲಂಬೋ: ಆರ್ಥಿಕ ಅಧೋಗತಿಗೆ ಇಳಿದಿರುವ ಶ್ರೀಲಂಕಾದಿಂದ ರವಿವಾರ 19 ನಿರಾಶ್ರಿತರು ಭಾರತದ ತಮಿಳುನಾಡಿಗೆ ಆಗಮಿ ಸಿದ್ದು, ಇವರಲ್ಲಿ ಮಹಿಳೆಯರು ಮಕ್ಕಳು ಸೇರಿದ್ದಾರೆ.
ಶ್ರೀಲಂಕಾದ ಜಾಫ್ನಾದಿಂದ ಸಣ್ಣ ಮೋಟಾರ್ ದೋಣಿಗಳಲ್ಲಿ ಹೊರಟಿರುವ ಇವರು, ರವಿವಾರ ಬೆಳಗ್ಗೆ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಧನುಷ್ಕೋಡಿಗೆ ಬಂದು ತಲುಪಿದ್ದಾರೆ.
ಇವರೂ ಸೇರಿದಂತೆ ಶ್ರೀಲಂಕಾದಿಂದ ಭಾರತಕ್ಕೆ ಮಾರ್ಚ್ ನಿಂದ ಇಲ್ಲಿಯವರೆಗೆ ನಿರಾಶ್ರಿತರಾಗಿ ಆಗಮಿಸಿರುವವರ ಸಂಖ್ಯೆ 39ಕ್ಕೇರಿದೆ ಎಂದು ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿದ ಪ್ರತಿಭಟನೆ ಕಾವು: ಅತ್ತ ಶ್ರೀಲಂಕಾದಲ್ಲಿ ಸರಕಾರದ ವಿರುದ್ಧ ಜನರು ನಡೆಸುತ್ತಿರುವ ಪ್ರತಿಭಟನೆಯ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಔಷಧಗಳು ಕ್ಷೀಣ: ವೈದ್ಯರ ಎಚ್ಚರಿಕೆ: ಲಂಕಾದಲ್ಲಿ ಔಷಧಗಳ ಸಂಗ್ರಹವು ಕ್ಷೀಣ ಸ್ಥಿತಿಗೆ ತಲುಪಿದ್ದು ಮುಂದಿನ ದಿನಗಳಲ್ಲಿ ಔಷಧಗಳ ಅಗಾಧ ಬರ ಉಂಟಾಗುವುದರ ಜತೆಗೆ ಜನಸಾಮಾನ್ಯರಿಗೆ ಯಾವುದೇ ವೈದ್ಯಕೀಯ ಸೌಲಭ್ಯ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಶ್ರೀಲಂಕಾ ವೈದ್ಯಕೀಯ ಸಂಸ್ಥೆ (ಎಸ್‌ಎಲ್‌ಎಂಎ) ಸರಕಾರವನ್ನು ಎಚ್ಚರಿಸಿದೆ.
ಈಗಾಗಲೇ ಅರಿವಳಿಕೆ ಸೇರಿದಂತೆ ಇನ್ನಿತರ ಶಸ್ತ್ರ ಚಿಕಿತ್ಸೆಗಳಲ್ಲಿ ಅತ್ಯಗತ್ಯವಾಗಿ ಬೇಕಾಗುವ ಔಷಧಗಳು ಗಣನೀಯವಾಗಿ ಕಡಿಮೆಯಾಗಿವೆ. ಹಾಗಾಗಿ ಕಳೆ ದೊಂದು ತಿಂಗಳಿನಿಂದ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಈಗ ಔಷಧಗಳು, ಶಸ್ತ್ರಚಿಕಿತ್ಸೆಗೆ ಬೇಕಾಗುವ, ಇನ್ನಿತರ ವೈದ್ಯಕೀಯ ಪರಿಕರಗಳ ದಾಸ್ತಾನು ಖಾಲಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೇವೆಗಳನ್ನು ನಿಲ್ಲಿಸಬೇಕಾಗುತ್ತದೆಂದು ಎಸ್‌ಎಲ್‌ಎಂಎಂ ಹೇಳಿದೆ.