Advertisement

ಬೈಕ್‌ ವೀಲಿಂಗ್‌ 19 ಮಂದಿ ಬಂಧನ

12:58 PM Aug 16, 2018 | |

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಬೈಕ್‌ ವೀಲಿಂಗ್‌ ಮಾಡುವವರ ಸಂಖ್ಯೆ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಟೊಂಕಕಟ್ಟಿ ನಿಂತಿರುವ ಸಂಚಾರ ಪೊಲೀಸರು ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಬುಧವಾರ ಸ್ವಾತಂತ್ಯೊತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ರಜೆ ಇರುವ ಕಾರಣ ನಗರದ ನಾಲ್ಕು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ವೀಲಿಂಗ್‌ ಮಾಡಿದ್ದ 19 ಮಂದಿಯನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಹೆಗ್ಗಡೆ ನಗರ ನಿವಾಸಿಗಳಾದ ಜಾಬೀರ್‌ ಷರೀಫ್, ಹರ್ಷದ್‌ ಖಾನ್‌, ಜಯಂತ್‌, ಕಿರಣ್‌, ನವೀನ್‌, ಸಾಹೀಬ್‌ ಬಂಧಿತರು.

ಆರೋಪಿಗಳಿಂದ ಏಳು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ಕೆಲವರು ವೆಲ್ಡಿಂಗ್‌ ಹಾಗೂ ಇನ್ನು ಕೆಲವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಂಧಿತರು ಬುಧವಾರ ದೊಡ್ಡಬಳ್ಳಾಪುರ ಮುಖ್ಯರಸ್ತೆ, ನಂದಿ ಹಿಲ್ಸ್‌ ರಸ್ತೆ ಹಾಗೂ ಕನ್ನಮಂಗಲ ಗೇಟ್‌ ಹಾಗೂ ರಾಷ್ಟ್ರೀಯ ಹೆದ್ದಾರಿ 7 ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್‌ ಮಾಡುತ್ತಿದ್ದರು.

ಈ ಮಾಹಿತಿ ಪಡೆದ ದೇವನಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ, 7 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಅಹ್ಮದ್‌, ಮನೋಜ್‌, ಸೈಯದ್‌ ಶಾಬಜ್‌, ಅಭಿಷೇಕ್‌, ಚಂದ್ರಶೇಖರ್‌, ಮೆಹಬೂಬ್‌ ಬಂಧಿತರು. ಆರೋಪಿಗಳಿಂದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಮತ್ತೂಂದು ಪ್ರಕರಣದಲ್ಲಿ ಕೆ.ಆರ್‌.ಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಮೂವರು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳಿಂದ ಐದು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಕಾಂತ್‌(19) ಮತ್ತು ವಿಜಯ್‌(20) ಬಂಧಿತರು. ಆರೋಪಿಗಳು ನ್ಯೂ ಹಾರಿಜನ್‌ ರಸ್ತೆ ಹಾಗೂ ಟಿ.ಸಿಪಾಳ್ಯ, ಭಟ್ಟರ ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವೀಲಿಂಗ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ರಾಜಾಜಿನಗರ ಸಂಚಾರ ಠಾಣಾ ವ್ಯಾಪ್ತಿಯ ಲಗ್ಗೇರಿ ಸೇತುವೆ ಬಳಿ ವೀಲಿಂಗ್‌ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಕಮಲನಗರದ ಸತೀಶ್‌ ಮತ್ತು ಕಾಮಾಕ್ಷಿಪಾಳ್ಯದ ನವೀನ್‌ ಬಂಧಿತರು. ಆರೋಪಿಗಳಿಂದ ಎರಡು ಬೈಕ್‌ ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next