ಕೋಲಾರ: ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಸಾಹಿತ್ಯ ಸೇವೆ ಮಾಡಿದ್ದರೂ ಎಲೆ ಮರೆಯ ಕಾಯಿಯಂತೆಯೇ ಉಳಿದುಬಿಟ್ಟಿದ್ದ ಡಾ.ಸಿ.ಎಂ.ಗೋವಿಂದರೆಡ್ಡಿಯವರ ಬದುಕು ಮತ್ತು ಬರಹಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಹದಿನೆಂಟನೇ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಯಿತು.
28 ವರ್ಷಗಳಿಂದಲೂ ಸಾಹಿತ್ಯ ಸೇವೆ ಮಾಡುತ್ತಿದ್ದರೂ ಡಾ.ಸಿ.ಎಂ.ಗೋವಿಂದರೆಡ್ಡಿ ಜಿಲ್ಲಾ ಸಾಹಿತಿಗಳ ವಲಯದಲ್ಲಿ ಹೆಚ್ಚು ಕಾಣಿಸಿ ಕೊಂಡವರಲ್ಲ. ಸಾಹಿತ್ಯದ ಗೋಷ್ಠಿಗಳಲ್ಲಿಯೂ ಅವರ ಮಾತು ಕೇಳಿಸಿಕೊಂಡವರು ತೀರಾ ವಿರಳ. ಏಕೆಂದರೆ, ಮೂಲತಃ ಗೋವಿಂದ ರೆಡ್ಡಿ ಮಿತಭಾಷಿ, ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದವರು. ಆದರೆ, ಇಂತವರ ಸಾಹಿತ್ಯ ಸೇವೆಯನ್ನು ಗುರುತಿಸಿ 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಕಸಾಪ ಡಾ.ಸಿ.ಎಂ.ಗೋವಿಂದರೆಡ್ಡಿ ಅವರ ಸಾಹಿತ್ಯ ವನ್ನು ಹೆಚ್ಚು ಪ್ರಚಾರಪಡಿಸುವಲ್ಲಿ ಸಫಲವಾಯಿತು. ಜೊತೆಗೆ ಗೋವಿಂದರೆಡ್ಡಿಯವರ ಸಾಧಕ ಬದುಕಿನ ಕುರಿತು ಸಾಹಿತ್ಯಾಸಕ್ತರಿಗೆ ಹೆಚ್ಚು ತಿಳಿಯುವಂತಾಯಿತು.
ತಮ್ಮ ಪರ ಮಾತನಾಡಿದ್ದೇ ಇಲ್ಲ: ಸಾಹಿತ್ಯ ಸಮ್ಮೇಳನದ ಮೊದಲ ದಿನವೂ ಸಾಹಿತ್ಯಾಸಕ್ತರಿಗೆ ಸಮ್ಮೇಳನಾಧ್ಯಕ್ಷರು ಅಪರಿಚರಂತೆಯೇ ಇದ್ದು ಬಿಟ್ಟಿದ್ದರು. ಸಮ್ಮೇಳನಾಧ್ಯಕ್ಷರ ಭಾಷಣ ಪ್ರತಿಯಲ್ಲಿಯೂ ಅವರ ಕುರಿತು ಹೆಚ್ಚಿನ ಮಾಹಿತಿ ಗಳಿರಲಿಲ್ಲ. ತಮ್ಮ ನೆಚ್ಚಿನ ಮಕ್ಕಳ ಸಾಹಿತ್ಯಕ್ಕೆ ಸಿಗದ ಮನ್ನಣೆ ಹಾಗೂ ಕೋಲಾರ ನೀರಾವರಿ ವಿಚಾರ, ರೈತಾಪಿ ವರ್ಗದ ಸ್ಥಿತಿಗತಿಗಳ ಬಗ್ಗೆಯೇ ಅವರ ಭಾಷಣವೂ ಇತ್ತು. ಮುದ್ರಿತ ಭಾಷಣದ ಹೊರತಾಗಿ ಸಮ್ಮೇಳನಾಧ್ಯಕ್ಷರು ತಮ್ಮ ಪರವಾಗಿ ಮಾತನಾಡಿದ್ದು ಇಲ್ಲವೇ ಇಲ್ಲ.
ಅದರೆ, ಎರಡನೇ ದಿನದ ಮೊದಲ ಗೋಷ್ಠಿಯಲ್ಲಿಯೇ ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತಂತೆ ಸುದೀರ್ಘವಾದ ಚರ್ಚೆ ನಡೆಯಿತು. ಈ ಗೋಷ್ಠಿಯ ಅಧ್ಯಕ್ಷತೆವಹಿಸಿದ್ದ ಡಾ.ಕೆ. ವೈ.ನಾರಾಯಣಸ್ವಾಮಿ ಸಮ್ಮೇಳನಾಧ್ಯಕ್ಷರ ಹಿನ್ನೆಲೆಯಲ್ಲಿ ತಮ್ಮದೇ ಧಾಟಿಯಲ್ಲಿ ಬಹಿರಂಗ ಪಡಿಸುವ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದರು.
ಸಾಧನೆಯ ಹಾದಿ: ಸಾಹಿತಿಯಾಗುವ ಯಾವುದೇ ಹಿನ್ನೆಲೆ ಇಲ್ಲದ, ಎಸ್‌ಎಸ್‌ಎಲ್‌ಸಿ ಫೇಲಾಗಿ ಹಸು ಮೇಯಿಸುತ್ತಿದ್ದವರು, ಶಿಕ್ಷಕರೊಬ್ಬರ ನೆರವಿನಿಂದ ಮತ್ತೇ ಎಸ್‌ಎಸ್‌ಎಲ್‌ಸಿ ಪಾಸಾಗಿ, ಟಿಸಿಎಚ್ ತೇರ್ಗಡೆಯಾಗಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಆನಂತರ ಪ್ರೌಢಶಾಲಾ ಶಿಕ್ಷಕರಾಗಿ, ಖಾಸಗಿ ವಿದ್ಯಾರ್ಥಿಯಾಗಿಯೇ ಪದವಿ ಪಡೆದು, ಸ್ನಾತಕೋತ್ತರ ಪದವಿ ಪಡೆದು, ಕಾಲೇಜಿಗೆಹೋಗದೆ ಕಾಲೇಜು ಉಪನ್ಯಾಸಕರಾಗಿದ್ದು, ಕಾಲೇಜು ಉಪನ್ಯಾಸಕರಾಗಿಯೇ ಕೋಲಾರ ಜಿಲ್ಲೆಯ ಜಾತ್ರೆಗಳ ಕುರಿತಂತೆ ಸಂಶೋಧನಾ ಪ್ರಬಂಧ ಬರೆದು ಪಿಎಚ್‌ಡಿ ಸಂಪಾದಿಸಿದ್ದು ಡಾ.ಸಿ.ಎಂ.ಗೋವಿಂದರೆಡ್ಡಿಯವರ ಸಾಧನೆಯ ಹಾದಿಯಾಗಿತ್ತು.
ಕಾಡಿದ್ದ ಅನಾರೋಗ್ಯ: ವೈಯಕ್ತಿಕವಾಗಿ ಅನಾ ರೋಗ್ಯದಿಂದ ಐದಾರು ಶಸ್ತ್ರಚಿಕಿತ್ಸೆಗೆ ತುತ್ತಾದರೂ ಎದೆಗುಂದದೆ ಆರಂಭಿಕವಾಗಿ ಮಕ್ಕಳ ಪದ್ಯಗಳನ್ನು ಬರೆಯಲು ಆರಂಭಿಸಿ, ಇದಕ್ಕೆ ಸಿಕ್ಕ ಮನ್ನಣೆಯಿಂದ ಮಕ್ಕಳ ಸಾಹಿತಿಯಾಗಿ ರೂಪುಗೊಂಡು, ಮಕ್ಕಳಿಗಾಗಿ ಕಥೆ ಕವನ, ನಾಟಕ, ಕಾದಂಬರಿ ಮಾತ್ರವಲ್ಲದೆ ಮಕ್ಕಳ ಮಹಾಕಾವ್ಯ ಮತ್ತೂಂದು ಮಹಾಭಾರತ ಬರೆದು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದು ಗೋವಿಂದರೆಡ್ಡಿಯವರ ಬರವಣಿಗೆಯ ಪ್ರೀತಿಗೆ ಸಾಕ್ಷಿಯಾಯಿತು.
-ಕೆ.ಎಸ್.ಗಣೇಶ್