ಕುಣಿಗಲ್: ನರೇಗಾ ಯೋಜನೆಡಿಯಲ್ಲಿ ಯಾರು ಕೂಲಿ ಮಾಡಿ ಬಾಕಿ ಇದೆಯೋ ಹಾಗೂ ಸಾಮಗ್ರಿ ಬಳಸಿದ್ದಿರೋ ಅವರಿಗೆ ಕೇಂದ್ರ ಸರ್ಕಾರ 1,860 ಕೋಟಿ ಹಣ ಬಿಡುಗಡೆ ಮಾಡಿದೆ, ಅಷ್ಟು ಹಣ ವನ್ನು ಎರಡು ಮೂರು ದಿನದ ಒಳಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಕೊಪ್ಪ ಗ್ರಾಪಂ ವ್ಯಾಪ್ತಿಯ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ ಎನ್‌ಆರ್‌ಐಜಿ ಜನೆ ಕಾಮಗಾರಿ ಪರಿಶೀಲನೆ ಹಾಗೂ ಕೋವಿಡ್-19 ಸಂಬಂಧಪಟ್ಟ ಗ್ರಾಪಂ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಇತ್ತೀಚಿಗೆ ಬಿಡುಗಡೆ ಮಾಡಿರುವ 1860 ಕೋಟಿ ರೂ. ಜತೆಗೆ ಹೆಚ್ಚುವರಿಯಾಗಿ ಒಂದು ಸಾವಿರ ಕೋಟಿ ರೂ. ಹಣ ನೀಡಿದೆ, ಈಗಾಗಲೇ ಕ್ರಿಯಾ ಯೋಜನೆ ತಯಾರಾಗುತ್ತಿದ್ದು ಈ ಸಂಬಂಧ ಎಲ್ಲಾ ಜಿಪಂ ಸಿಇಒಗಳಿಗೆ ಸೂಚಿಸಲಾಗಿದೆ ಎಂದರು.
ಬಾಕಿ ಹಣಕ್ಕೆ ಆಗ್ರಹ: ಶಾಸಕ ಡಾ.ರಂಗನಾಥ್ ಮಾತನಾಡಿ, ತಾಲೂಕಿನ ವಿವಿಧೆಡೆ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ಆದರೆ ಉಜ್ಜಿನಿ ಗ್ರಾಮದ ಆಗಿರುವ ಅವ್ಯವಹಾರದಿಂದ ಇತರೆ ಯವರು ಮಾಡಿರುವ ಕಾಮಗಾರಿಯ ಬಿಲ್ ಅನ್ನು ತಡೆ ಹಿಡಿಯಲಾಗಿದೆ ಕೂಡಲೇ ಹಣ ಬಿಡುಗಡೆ ಮಾಡಿ ಜಾಬ್ ಕಾರ್ಡ್ ಇರುವರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಪಡಿಸಿದರು.
ಅವ್ಯವಹಾರ: ಜಿಪಂ ಸಿಇಒ ಶುಭಾ ಕಲ್ಯಾಣ್ ಮಾತನಾಡಿ, ತಾಲೂಕಿನಲ್ಲಿ ನಿರ್ಮಾಣಗೊಂಡಿರುವ 207ಕ್ಕೂ ಅಧಿಕ ಚೆಕ್ ಡ್ಯಾಂ ಪೈಕಿ 13 ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ. 13 ಹೊರತು ಪಡಿಸಿ ಉಳಿದ ಕಾಮಗಾರಿಯ ಬಿಲ್ ಹಣ ನೀಡುವಂತೆ ನರೇಗಾ ಆಯುಕ್ತರಿಗೆ ವರದಿ ನೀಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದ ಅವರು, ಜಿಲ್ಲೆಯ 10 ತಾಲೂಕು ಪೈಕಿ ಏಳು ತಾಲೂಕು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಆ ತಾಲೂಕಿನ ಕುಡಿಯುವ ನೀರಿಗೆ ಒಂದು ಕೋಟಿ ರೂ. ಬಿಡುಗಡೆಯಾಗಿದ್ದು 50 ಲಕ್ಷ ರೂ. ಕುಡಿಯುವ ನೀರಿಗೆ ಖರ್ಚು ಮಾಡಲಾಗಿದೆ. ಬರವಲ್ಲದ ಮೂರು ತಾಲೂಕಿಗೂ 25 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಸಿಇಒ ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ರಮೇಶ್, ತಹಶೀಲ್ದಾರ್ ವಿ.ಆರ್.ವಿಶ್ವನಾಥ್, ಡಿವೈಎಸ್‌ಪಿ ಜಗದೀಶ್, ತಾಪಂ ಅಧ್ಯಕ್ಷ ಹರೀಶ್‌ನಾಯ್ಕ, ಇಒ ಶಿವರಾಜಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಬಲರಾಮ್, ಸದಸ್ಯ ದಿನೇಶ್, ಗ್ರಾಪಂ ಅಧ್ಯಕ್ಷೆ ರಶೀದಾ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಇದ್ದರು.
ಲಾಕ್‌ಡೌನ್ ಉಲ್ಲಂಘನೆ
ಕೋವಿಡ್-19 ತಡೆಗೆ ಸಾಮಾಜಿಕ ಅಂತರವಿರಬೇಕೆಂದು ಸರ್ಕಾರವೇ ಕರೆ ನೀಡಿದೆ ಆದರೆ ಗುರುವಾರ ಕೊಪ್ಪದಲ್ಲಿ ನಡೆದ ಕೋವಿಡ್-19 ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅದನ್ನು ಉಲ್ಲಂಘಿಸಿದರು. ಸಚಿವರು ಸಭೆ ಮುಗಿಯುತ್ತಿದಂತೆ ಸಚಿವರ ಸುತ್ತಾ ಪಕ್ಷದ ಕಾರ್ಯಕರ್ತರು, ಅಧಿಕಾರಿಗಳು ಸೇರಿದಂತೆ 20ಕ್ಕೂ ಅಧಿಕ ಮಂದಿ ಸಚಿವರಿಗೆ ಸನ್ಮಾನಿಸಿ ಅವರೊಂದಿಗೆ ಇದ್ದು ಸೆಲ್ಪಿ ತೆಗೆದುಕೊಳ್ಳುತ್ತಾ ಸಾಮಾಜಿಕ ಅಂತರ ಪಾಲಿಸಲಿಲ್ಲ.