Advertisement
ತುಮಕೂರು: ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದ್ದಂತೆ ಕಲ್ಪತರು ನಾಡಿನಲ್ಲಿ ಬೇಸಗೆ ಆರಂಭವಾಗುತ್ತಲೇ ಸಹಜವಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಮಳೆ ಇಲ್ಲದೇ ಅಂತರ್ಜಲ ಕೊರತೆ ಎದುರಿಸುತ್ತಿರುವ ಜಿಲ್ಲೆಯಲ್ಲಿ ಕೊಳವೆಬಾವಿಯಿಂದ ಬರುತ್ತಿರುವ ನೀರು ಫ್ಲೋರೈಡ್‌ನಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಘಟಕ ಸ್ಥಾಪಿಸಿದರೂ ವಿವಿಧ ಕಡೆ ಘಟಕಗಳು ಸ್ಥಗಿತಗೊಳ್ಳುತ್ತಿವೆ.
Related Articles
Advertisement
ಏಜೆನ್ಸಿಗಳ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ನಿರ್ವಹಣೆ ಮಾಡಲು 11 ಏಜೆನ್ಸಿಗಳಿಗೆ ಗುತ್ತಿಗೆ ನೀಡಿದ್ದು, ಇದರಲ್ಲಿ 7 ಏಜೆನ್ಸಿಗಳು ನಿರ್ವಹಣೆ ಮಾಡುತ್ತಿವೆ. 4 ಏಜೆನ್ಸಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ವಿವಿಧೆಡೆ ಘಟಕಗಳು ಸ್ಥಗಿತಗೊಂಡಿವೆ. ಗ್ರಾಪಂಗೂ ಹಸ್ತಾಂತರಿಸದೇ, ತಾವು ನಿರ್ವಹಿಸದೆ ನಿರ್ಲಕ್ಷ್ಯ ವಹಿಸಿವೆ. ಈ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 10 ಲಕ್ಷ ರೂ.ವರೆಗೆ ಖರ್ಚಾಗುತ್ತದೆ. ಒಂದು ಘಟಕದಲ್ಲಿ 20 ಲೀ. ನೀರು ಪಡೆಯಲು 2 ರೂ. ನಾಣ್ಯ ಹಾಕಿ ನೀರು ಪಡೆಯಬೇಕು. ಕೆಲವು ಕಡೆ ನಿರ್ವಹಣೆ ಉತ್ತಮವಾಗಿದೆ. ಜನರಿಗೆ ಶುದ್ಧ ನೀರು ಸಿಗುತ್ತಿದೆ. ಕೆಲವು ಕಡೆ ನಾಣ್ಯ ಹಾಕಿದರೂ ನೀರು ಬರುತ್ತಿಲ್ಲ. ವಿದ್ಯುತ್ ಸಮಸ್ಯೆ, ಬೋರ್‌ವೆಲ್‌ನಲ್ಲಿ ನೀರು ಬತ್ತಿರುವುದು ಸೇರಿ ಹಲವು ಸಮಸ್ಯೆಗಳೂ ಇವೆ.
ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತವಾಗಿರುವಲ್ಲಿ ಮತ್ತೆ ಆರಂಭಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಪಾವಗಡ ತಾಲೂಕಿನಲ್ಲಿ 48 ಘಟಕ ಸ್ಥಗಿತಗೊಂಡಿವೆ. ಶುದ್ಧ ಕುಡಿಯುವ ನೀರಿನ ಘಟಕದ ಮಷಿನ್ ಹಾಳಾಗಿದೆ. ಅದರ ಬೆಲೆ 70 ಸಾವಿರ ರೂ. ಆಗುತ್ತದೆ. ಅದನ್ನು ಗುತ್ತಿಗೆ ಪಡೆದಿರುವ ಏಜೆನ್ಸಿ ಸರಿಪಡಿಸಬೇಕು. ಆದರೆ ಈವರೆಗೆ ಆಗಿತ್ತಿಲ್ಲ, ಗ್ರಾಪಂನವರಿಗೂ ಹಸ್ತಾಂತರಿಸಿಲ್ಲ. ಕೆಲವು ಕಡೆ ನೀರು ಶುದ್ಧೀಕರಣವಾಗದೇ ಫ್ಲೋರೈಡ್ ನೀರನ್ನೇ ಜನ ಕುಡಿಯುವ ಸ್ಥಿತಿ ಪಾವಗಡದಲ್ಲಿದೆ.-ಸೊಗಡು ವೆಂಕಟೇಶ್, ಪಾವಗಡ ತಾಪಂ ಅಧ್ಯಕ್ಷ ವಿವಿಧ ಕಾರಣದಿಂದ ಸುಮಾರು 184 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಪಾವಗಡ, ಮಧುಗಿರಿ ಭಾಗದಲ್ಲಿಯೇ ಹೆಚ್ಚು ಘಟಕಗಳು ಸ್ಥಗಿತಗೊಂಡಿದ್ದು, ಈ ಸಂಬಂಧ ಸರ್ಕಾರಕ್ಕೂ ಮಾಹಿತಿ ತಿಳಿಸಿದ್ದೇವೆ. ಸಂಬಂಧಿಸಿದ ಏಜೆನ್ಸಿಯವರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ಸ್ಪಂದಿಸಿಲ್ಲ. ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಬೇರೆಯವರಿಗೆ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಡಿ.27ರಂದು ಸಚಿವರು ಸಭೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಶುದ್ಧ ನೀರು ನೀಡಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ.
-ಶುಭಾ ಕಲ್ಯಾಣ್, ಜಿಪಂ ಸಿಇಒ ಶುದ್ಧ ಕುಡಿಯುವ ನೀರಿನ ಘಟಕ ನಿಂತು ಹಲವು ತಿಂಗಳುಗಳೇ ಕಳೆದಿದೆ. ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ. ಫ್ಲೋರೈಡ್ ನೀರು ಕುಡಿದು ತೊಂದರೆ ಅನುಭವಿಸುತ್ತಿದ್ದೇವೆ. ಅಧಿಕಾರಿಗಳು ಕ್ರಮ ಕೈಗೊಳ್ಳಲಿ.
-ಶಿವಣ್ಣ, ನಾಗರಿಕ ಶುದ್ಧ ಕುಡಿಯುವ ನೀರಿನ ಘಟಕ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿದೆ. ಕೆಲವು ಘಟಕ ಸ್ಥಗಿತಗೊಂಡಿವೆ, ಈ ಬಗ್ಗೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಪಂ ನಿರ್ವಹಣೆಗೆ ನೀಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಘಟಕ ಸರಿಪಡಿಸಿ ಶುದ್ಧ ಕುಡಿಯುವ ನೀರು ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.
-ಎಸ್. ಕೆ.ಪ್ರಕಾಶ್, ಕಾರ್ಯಪಾಲಕ ಎಂಜಿನಿಯರ್ ತಾಲೂಕುವಾರು ವಿವರ
ತಾಲೂಕು ಮಂಜೂರು ಘಟಕ ಸ್ಥಾಪಿತ ಘಟಕ ಚಾಲ್ತಿಘಟಕ ಸ್ಥಗಿತ ಘಟಕ
ಚಿ.ನಾ ಹಳ್ಳಿ 113 113 86 27
ಗುಬ್ಬಿ 140 139 118 21
ಕೊರಟಗೆರೆ 151 147 140 07
ಕುಣಿಗಲ್ 140 99 79 20
ಮಧುಗಿರಿ 227 226 206 20
ಪಾವಗಡ 270 269 238 31
ಶಿರಾ 210 210 182 28
ತಿಪಟೂರು 111 91 80 11
ತುಮಕೂರು 124 124 112 12
ತುರುವೆಕೆರೆ 78 77 70 07 * ಚಿ.ನಿ.ಪುರುಷೋತ್ತಮ್