Advertisement
ಜನವರಿ 1ರಿಂದ ಫೆ. 27ರ ವರೆಗೆ ನವಮಂಗಳೂರು ಬಂದರಿಗೆ ವಿದೇಶದ 18 ಹಡಗುಗಳು ಆಗಮಿಸಿದ್ದು, ಒಟ್ಟು 18,351 ಪ್ರವಾಸಿಗರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಇದು ಈವರೆಗಿನ ಹೊಸ ದಾಖಲೆ. ವಿಶೇಷವೆಂದರೆ ಮುಂದಿನ ತಿಂಗಳಿನಲ್ಲಿ ಒಟ್ಟು 6 ವಿದೇಶಿ ಹಡಗುಗಳು ಮತ್ತೆ ವಿದೇಶದಿಂದ ಬರಲಿದ್ದು, ಎಪ್ರಿಲ್‌ನಲ್ಲಿಯೂ ನಾಲ್ಕು ಹಡಗುಗಳು ಬರಲಿವೆ ಎಂಬುದು ಸದ್ಯದ ಮಾಹಿತಿ. ಈ ಮೂಲಕ ನಗರ ವಿದೇಶೀ ಪ್ರವಾಸಿಗರ ಪಾಲಿಗೆ ಪ್ರವಾಸೋದ್ಯಮದ ಸ್ವರ್ಗ ಎಂದು ಪರಿಗಣಿತವಾಗಿದೆ.
ವಿದೇಶಿ ಪ್ರವಾಸಿಗರು ಒಂದು ದಿನ ಜಿಲ್ಲೆಯ ಕದ್ರಿ ದೇವಾಲಯ, ಕುದ್ರೋಳಿ, ಮಂಗಳಾದೇವಿ, ಸೈಂಟ್ ಅಲೋಶಿಯಸ್ ಚಾಪೆಲ್, ಮಿಲಾಗ್ರಿಸ್ ಚರ್ಚ್, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿ, ಕುಲಶೇಖರ ಕ್ಯಾಶೂ ಫ್ಯಾಕ್ಟರಿ, ನಗರದ ಮಾಲ್ ಗಳು, ಮೂಡುಬಿದಿರೆ ಸಾವಿರಕಂಬದ ಬಸದಿ, ಸೋನ್ಸ್ ಫಾರಂ, ಪಿಲಿಕುಳ ನಿಸರ್ಗಧಾಮಗಳ ವೀಕ್ಷಣೆಗೆ ತೆರಳುತ್ತಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯದಿಂದ ನಗರ ಸುತ್ತುವ ಜತೆಗೆ ಟೂರ್ ಪ್ಯಾಕೇಜ್‌ನಲ್ಲಿ ಮೊದಲೇ ಆಯ್ಕೆ ಮಾಡಿಕೊಂಡಂತೆ ಪ್ರವಾಸಿಗರು, ಬಸ್, ರಿಕ್ಷಾ, ಸೈಕಲ್‌ಗಳಲ್ಲಿ ವಿವಿಧೆಡೆ ಸಂಚರಿಸುವವರೂ ಇದ್ದಾರೆ.
Related Articles
ನವಮಂಗಳೂರು ಬಂದರಿನ (ಎನ್‌ಎಂಪಿಟಿ)ಕ್ರೂಸ್ ಲಾಂಜ್‌ನಲ್ಲಿ ಪ್ರವಾಸಿ ಮಾಹಿತಿ ಕೇಂದ್ರವನ್ನು ದ.ಕ. ಜಿಲ್ಲಾಡಳಿತ ಇತ್ತೀಚೆಗೆ ಆರಂಭಿಸಿತ್ತು. ಪ್ರತಿ ವರ್ಷ 30ಕ್ಕೂ ಅಧಿಕ ಕ್ರೂಸ್‌ಗಳಲ್ಲಿ 35,000ಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಫ್ರಾನ್ಸ್, ಜರ್ಮನ್, ರಷ್ಯಾ ಮುಂತಾದ ದೇಶಗಳಿಂದ ಆಗಮಿಸುತ್ತಾರೆ. ಈ ಮಾದರಿ ಕಿಯೋಸ್ಕ್ ದೇಶದಲ್ಲೇ ಪ್ರಥಮವಾಗಿದ್ದು, ಮಾಹಿತಿ ಕೇಂದ್ರದ ಸಂಪೂರ್ಣ ಸದ್ಬಳಕೆಗೆ ಕಾರ್ಯಯೋಜನೆ ರೂಪಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಸುಸಜ್ಜಿತವಾದ ಪ್ರವಾಸಿ ಮಾಹಿತಿ ಕೇಂದ್ರದ ಮೂಲಕ ಮಾಹಿತಿ ಹಾಗೂ ಕನಿಷ್ಠ ದರಗಳಲ್ಲಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರೀಪೈಡ್ ಟ್ಯಾಕ್ಸಿ ಕೌಂಟರ್‌ಗಳನ್ನು ಒದಗಿಸಲಾಗಿದೆ.
Advertisement
ವಿದೇಶಿಗರ ಸಂಖ್ಯೆ ಅಧಿಕಮಂಗಳೂರಿಗೆ ಪ್ರಸ್ತುತ ದಿನಗಳಲ್ಲಿ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಕೇಂದ್ರ ನಿರ್ಮಿಸಲಾಗಿದೆ. ಜತೆಗೆ ಖಾಸಗಿ ಏಜೆನ್ಸಿಯವರ ಮೂಲಕ ವಿದೇಶಿಗರು ಮಂಗಳೂರು ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.
– ಉದಯ ಕುಮಾರ್ ಶೆಟ್ಟಿ,
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ದಿನೇಶ್ ಇರಾ