ಭಾಲ್ಕಿ: ಕನ್ನಡ ದಿನಪತ್ರಿಕೆಗಳಿಗೆ ಸುಮಾರು 180 ವರ್ಷಗಳ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕನ್ನಡ ಪತ್ರಿಕೆಗಳು ಸಮಾಜಪರ ಕಾರ್ಯ ಮಾಡುತ್ತಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಿಕೆಐಟಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೀದರ ಜಿಲ್ಲೆಯಲ್ಲಿ ಪತ್ರಿಕಾರಂಗವೂ ಬೆಳೆದು ನಿಂತಿದೆ. ನಮಗೆ ಸ್ವಾತಂತ್ರ್ಯ ಸಿಗುವಲ್ಲಿ ಮಾಧ್ಯಮಗಳ ಪಾತ್ರ ಬಹಳಷ್ಟಿದೆ. ಸ್ವಾತಂತ್ರ್ಯದ ನಂತರವೂ ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳು ಉತ್ತಮ ಕಾರ್ಯ ಮಾಡುತ್ತಿವೆ. ಮಾಧ್ಯಮಗಳಲ್ಲಿ ಭಾವನಾತ್ಮಕ ವಿಚಾರ ಕೆರಳಿಸುವ ಸುದ್ದಿ ಕಡಿಮೆಯಾಗಬೇಕು. ಮಾಧ್ಯಮದವರು ತಮ್ಮದೇ ಆದ ರೀತಿ, ನೀತಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು ಎಂದರು.
ಹಿರಿಯ ಪತ್ರಕರ್ತ ದೇವಯ್ನಾ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯತೆ- ಸ್ವಾತಂತ್ರ್ಯದ ಕಿಚ್ಚು ಹಚ್ಚಲು ಗಾಂಧಿ ಪತ್ರಿಕೆ ತೆರೆದರೆ, ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಧ್ಯಮಗಳು ಸಾಕಷ್ಟು ಕಾರ್ಯ ಮಾಡಿವೆ. ಪತ್ರಕರ್ತರು ಬಂಗಾರದ ನಾಣ್ಯಗಳಾಗಬೇಕು. ಜಗತ್ತಿನಾದ್ಯಂತ ಚಲಾವಣೆಯಲ್ಲಿರುವ ಒಂದೇ ನಾಣ್ಯ ಅದು ಬಂಗಾರದ ನಾಣ್ಯ ಎಂದರು.
ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರು ಆತ್ಮಾವಲೋಕನ ದಿನವನ್ನಾಗಿ ಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಸುಮಾರು 60ಕ್ಕಿಂತಲೂ ಹೆಚ್ಚು ಪತ್ರಕರ್ತರನ್ನು ಸನ್ಮಾನಿಸಲಾಯಿತು. ಈ ವೇಳೆ ಪುರಸಭೆ ಅಧ್ಯಕ್ಷ ಅನೀಲ ಸುಂಟೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಮುಗಟೆ, ಅಪ್ಪಾರಾವ್ ಸೌದಿ, ಶಶಿಕಾಂತ ಬಂಬುಳಗೆ, ರೇವಣಸಿದ್ದ ಪಾಟೀಲ, ಶ್ರೀಕಾಂತ ಬಿರಾದಾರ, ಸುರೇಶ ನಾಯಕ, ಮಲ್ಲಿಕಾರ್ಜುನ ಮರಕಲೆ, ಲಿಂಗೇಶ ಮರಕಲೆ, ಸಂಜೀವಕುಮಾರ ಬಕ್ಕಾ, ರಾಜಕುಮಾರ ಸ್ವಾಮಿ ಇದ್ದರು.
ಬಿಕೆಐಟಿ ಪ್ರಾಂಶುಪಾಲ ಡಾ| ನಾಗಶೆಟ್ಟಿ ಬಿರಾದಾರ ಸ್ವಾಗತಿಸಿದರು. ಡಾ| ಬಸವರಾಜ ಕಾವಡಿ ನಿರೂಪಿಸಿದರು. ಡಾ| ಬಿ. ಸೂರ್ಯಕಾಂತ ವಂದಿಸಿದರು.